ಬೆಂಗಳೂರು (ಕರಾವಳಿ ಟೈಮ್ಸ್) : ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ವಿರುದ್ಧ ದಾಖಲಿಸಿರುವ ಎಫ್‍ಐಆರ್ ವಾಪಸ್ ಪಡೆಯಬೇಕು ಹಾಗು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿದೆ.
ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾಗೆ ಕಾಂಗ್ರೆಸ್ ನಿಯೋಗ ಗುರುವಾರ ಭೇಟಿ ನೀಡಿತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ಸೇರಿದಂತೆ ಪ್ರಮುಖ ನಾಯಕರು ಜೊತೆಗಿದ್ದರು. ಸೋನಿಯಾ ಗಾಂಧಿ ವಿರುದ್ಧ ಪ್ರಕರಣ ಕೈಬಿಡಬೇಕು, ಪ್ರಕರಣ ದಾಖಲಿಸಿದ ಪೆÇಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಆಗ್ರಹಿಸಿತು.
ಮುಖ್ಯಮಂತ್ರಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಿವಮೊಗ್ಗದ ಪ್ರವೀಣ್ ಕುಮಾರ್ ಎಂಬ ವಕೀಲ, ಪೆÇಲೀಸ್ ಅಧಿಕಾರಿಯೊಬ್ಬರ ಜೊತೆ ಸೇರಿ ಒಂದು ದೂರು ಕೊಟ್ಟು ಸೋನಿಯಾಗಾಂಧಿ ವಿರುದ್ಧ ಎಫ್‍ಐಆರ್ ದಾಖಲು ಮಾಡಿದ್ದಾರೆ. ಇದು ಸೂಕ್ಷ್ಮ ವಿಚಾರ. ಇಡೀ ದೇಶದಲ್ಲೇ ಸಂಚಲವನ್ನುಂಟುಮಾಡುವ ವಿಚಾರವಾಗಿದೆ. ದ್ವೇಷದ ಮನೋಭಾವ, ಅಧಿಕಾರ ದುರುಪಯೋಗದಿಂದ ಇದು ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳು ಯಾವ ಮಟ್ಟಕ್ಕೆ ಕೆಲಸ ಮಾಡಬೇಕು ಎನ್ನುವ ದೊಡ್ಡ ಚರ್ಚೆ ಕೂಡ ನಾವು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಗೃಹ ಸಚಿವರ ಜತೆ ಮಾತನಾಡಿದ್ದು, ಇದೀಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ ಎಂದರು. ಇದು ಸೂಕ್ಷ್ಮ ವಿಚಾರ. ಹಾಗಾಗಿ ನಾವು ಹೋರಾಟ ಮಾಡುವ ಮೊದಲು ನಮ್ಮ ಪಕ್ಷದ ಪರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದರು.
ಈ ಸಂಬಂಧ 24 ಗಂಟೆಯಲ್ಲಿ ಬಿ ರಿಪೆÇೀರ್ಟ್ ಸಲ್ಲಿಕೆ ಮಾಡಲಾಗುತ್ತದೆ. ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಒಂದು ನಿಮಿಷದ ಚರ್ಚೆಗೂ ಅವಕಾಶ ನೀಡದೆ ನಮಗೆ ಭರವಸೆ £ೀಡಿದ್ದಾರೆ ಎಂದು ಡಿಕೆಶಿ ಹೇಳಿದರು.
ಪ್ರಧಾನಿ ಕೊರೊನಾ ಕೇರ್ ಫಂಡ್ ಸಂಬಂಧ ಟ್ವಿಟ್ಟರ್‍ನಲ್ಲಿ ಹಾಕಲಾಗಿದ್ದ ಸಂದೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗ ಜಿಲ್ಲೆಯ ಸಾಗರದ ವಕೀಲ ಪ್ರವೀಣ್ ಕುಮಾರ್ ಎಂಬವರು ಸಾಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸೋನಿಯಾ ಗಾಂಧಿ ಮತ್ತು ಅವರ ಟ್ವಿಟ್ಟರ್ ಖಾತೆ ನಿರ್ವಹಿಸುವ ಸಿಬ್ಬಂದಿಯ ಮೇಲೂ ದೂರು ದಾಖಲಿಸಿದ್ದರು. ಕಾಂಗ್ರೆಸ್ ಪ್ರಧಾನಿ ನರೆಂದ್ರ ಮೋದಿ ಅವರು ಪಿಎಂ ಕೇರ್ ನಿಧಿಗೆ ಬಂದ ಹಣದ ದುರುಪಯೋಗ ಮಾಡುತ್ತಿದ್ದಾರೆಂದು ಟ್ವೀಟ್ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕೋವಿಡ್-19 ಸಂದರ್ಭದಲ್ಲಿ ಪ್ರಧಾನಿ ಮೋದಿ ಪಿಎಂ ಕೇರ್ ಫಂಡ್ ಸದ್ಬಳಕೆ ಮಾಡುತ್ತಿಲ್ಲ. ಬದಲಾಗಿ ಬಂದಿರುವ ಹಣವನ್ನು ವಿದೇಶ ಪ್ರಯಾಣಕ್ಕೆ ಬಳಸಲಾಗುತ್ತಿದೆ. ಪಿಎಂ ಕೇರ್ ಫಂಡ್ ಅನ್ನು ಪ್ರಧಾನಿ ಮೋದಿ ಅವರಿಗೋಸ್ಕರ ಮಾಡಲಾಗಿದೆ. ದಾನಿಗಳಿಂದ ಬಂದ ಹಣವನ್ನು ಯಾವುದೇ ಜನ ಸಾಮಾನ್ಯರಿಗೆ ಬಳಸುತ್ತಿಲ್ಲವೆಂದು ಟ್ವಿಟ್ಟರ್‍ನಲ್ಲಿ ಉಲ್ಲೇಖಿಸಲಾಗಿದೆ ಎಂದು ವಕೀಲ ಪ್ರವೀಣ್ ದೂರಿನಲ್ಲಿ ಆರೋಪಿಸಿದ್ದಾರೆ.
ಪಿಎಂ ಕೇರ್ ಫ್ರಾಡ್ ಎಂಬ ಶೀರ್ಷಿಕೆಯೊಂದಿಗೆ ಪ್ರಧಾನಿ ಮೋದಿ ಅವರ ವಿರುದ್ಧ ಅವಹೇಳನಕಾರಿ ಗಾಳಿ ಸುದ್ದಿಯನ್ನು ಕಾಂಗ್ರೆಸ್ ಮಾಡಿದೆ. ಈ ಎಲ್ಲಾ ಟ್ವೀಟ್‍ಗಳು ಉದ್ದೇಶ ಪೂರ್ವಕವಾಗಿ ಭಾರತ ಸರಕಾರ ಮತ್ತು ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡುವಂತಿವೆ. ಜೊತೆಗೆ ನಾಗರಿಕರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವ ಸುಳ್ಳು ಸಂದೇಶವಾಗಿದೆ ಎಂದು ವಕೀಲ ಪ್ರವೀಣ್ ದೂರಿನಲ್ಲಿ ಉಲ್ಲೇಖಿಸಿದ್ದರು.
ದೂರನ್ನು ಮೇಲಾಧಿಕಾರಿಗಳ ಗಮನಕ್ಕೆ ತರದೇ ಪಿಎಸ್‍ಐ ಎಫ್‍ಐಆರ್ ದಾಖಲಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ಪಿಎಸ್‍ಐ ಅವರನ್ನು ಅಮಾನತು ಮಾಡುವಂತೆ ಮನವಿ ಸಲ್ಲಿಸಿದೆ.
ದೆಹಲಿಯ ಐಎನ್‍ಸಿ ಕಚೇರಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬಿಡುಗಡೆ ಆಗಿದೆ ಎನ್ನಲಾದ ಸುದ್ದಿಯನ್ನು ತಿರುಚಲಾಗಿದೆ. ವಕೀಲ ಕೆ.ವಿ. ಪ್ರವೀಣ್ ಕುಮಾರ್ ಅವರು ನೈಜ ಸುದ್ದಿಗೆ ಸುಳ್ಳು ಅಂಶಗಳನ್ನು ಸೇರಿಸಿ ದೂರು ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
0 comments:
Post a Comment