ಮಂಗಳೂರು (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 4 ರಿಂದ ಲಾಕ್‍ಡೌನ್ ಕೊಂಚ ಸಡಿಲಿಕೆಯಾಗಲಿದ್ದು, ಇಂದು ಬೆಳಿಗ್ಗೆ 7 ರಿಂದ ಕಾರ್ಯಗತಗೊಳ್ಳಲಿದೆ. ಈ ಬಗ್ಗೆ ದ.ಕ. ಜಿಲ್ಲಾಧಿಕಾರಿ ರೂಪಾ ಸಿಂದೂರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಲಾಕ್‍ಡೌನ್ ಸಡಿಲಿಕೆ ಆದರೂ ಜನ ಮಾತ್ರ ಕೋರೋನಾ ವೈರಸ್ ಅಪಾಯದ ಬಗ್ಗೆ ಎಚ್ಚರಿಕೆಯಿಂದಲೇ ವ್ಯವಹರಿಸುವಂತೆ ಅವರು ಸಲಹೆ ನೀಡಿದ್ದಾರೆ.
ಮೇ 4 ರಿಂದ ಆಸ್ಪತ್ರೆಗಳ ಒಪಿಡಿಗಳು ಕಾರ್ಯಾಚರಣೆ ಮಾಡಲಿದ್ದು, ವೈದ್ಯಕೀಯ ಕ್ಲಿನಿಕ್‍ಗಳು, ಮೆಡಿಕಲ್‍ಗಳು ತೆರೆದಿರಲಿದೆ. ಕಂಟೈನ್ಮೆಂಟ್ ಝೋನ್ ಹಾಗೂ ಸೀಲ್‍ಡೌನ್ ಪ್ರದೇಶಗಳ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಆಟೋ ರಿಕ್ಷಾ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಒಬ್ಬ ಚಾಲಕ, ಇಬ್ಬರು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಟ್ಯಾಕ್ಸಿ, ಕ್ಯಾಬ್‍ಗಳ ಓಡಾಟಕ್ಕೂ ಅವಕಾಶ ನೀಡಲಾಗಿದ್ದು ಒಬ್ಬ ಚಾಲಕ, ಇಬ್ಬರು ಪ್ರಯಾಣಿಕ ಸಂಚಾರ ಮಾಡಬಹುದಾಗಿದೆ. ಕಾರು ಮೊದಲಾದ ನಾಲ್ಕು ಚಕ್ರದ ವಾಹನಗಳಲ್ಲಿ ಇಬ್ಬರು ಮಾತ್ರ ತೆರಳಬಹುದಾಗಿದೆ. ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರವೇ ತೆರಳಬಹುದಾಗಿದೆ.
ಕಂಟೈನ್ಮಂಟ್ ಝೋನ್ ಹೊರತುಪಡಿಸಿ ಅವಕಾಶ ನೀಡಿದ ಕಾರ್ಯಗಳಿಗೆ ಖಾಸಗಿ ವಾಹನಗಳು ಜಿಲ್ಲೆಯಲ್ಲಿ ಸಂಚಾರ ಮಾಡಬಹುದಾಗಿದ್ದು ಹೊರ ಜಿಲ್ಲೆಗಳಿಗೆ ತೆರಳಬೇಕಾದ್ದಲ್ಲಿ ಪಾಸ್ ಪಡೆಯಬೇಕು. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಗ್ರಾಮೀಣ, ನಗರ ಭಾಗಗಳಲ್ಲಿ ಉತ್ಪಾದಕ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದ್ದು, ಐಟಿ, ಹಾರ್ಡ್‍ವೇರ್ ತಯಾರಿ ಮಳಿಗೆಗಳು ತೆರೆಯಬಹುದಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಲಾಗಿದ್ದು ಎಲ್ಲಾ ಸಣ್ಣ ಪುಟ್ಟ ಅಂಗಡಿಗಳು ತೆರೆಯಬಹುದಾಗಿದೆ. ಇ-ಕಾಮಾರ್ಸ್ ಚಟುಚಟಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು ಖಾಸಗಿ ಸಂಸ್ಥೆಗಳಿಗೆ ಶೇ 33 ರಷ್ಟು ಸಿಬ್ಬಂದಿಗಳನ್ನು ಬಳಸಿ ಕಾರ್ಯಾಚರಣೆ ನಡೆಸಬಹುದಾಗಿದೆ.
ಶಾಲಾ ಕಾಲೇಜುಗಳಿಗೆ, ಕೋಚಿಂಗ್ ಸೆಂಟರ್‍ಗಳಿಗೆ, ಸಿನಿಮಾ ಥಿಯೇಟರ್, ಮಾಲ್‍ಗಳಿಗೆ, ಜಿಮ್‍ಗಳಿಗೆ, ಬಾರ್, ಕ್ಲಬ್, ಪಬ್, ಮನರಂಜನಾತ್ಮಕ ಪಾರ್ಕ್, ಸಭಾಂಗಣ, ಬಟ್ಟೆಯಂಗಡಿ, ಸ್ಪಾ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಧಾರ್ಮಿಕ ಸಮಾರಂಭ ನಡೆಸಲು ಅವಕಾಶ ಇರುವುದಿಲ್ಲ. ಸೆಲೂನ್, ಸ್ಪಾ, ಬಟ್ಟೆ ಅಂಗಡಿಗೆ ಅವಕಾಶವಿಲ್ಲ.
ಈ ಎಲ್ಲಾ ಸಡಿಲಿಕೆ ಇದ್ದರೂ ಜನ ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬಂದು ಇವುಗಳನ್ನು ಉಪಯೋಗಿಸಬಹುದೇ ಹೊರತು ಅನಾವಶ್ಯಕ ರಸ್ತೆಗಳಲ್ಲಿ ಸಂಚರಿಸುವುದನ್ನು ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು ಎಂದು ಎಂದಿರುವ ಡೀಸಿ ಮೇಡಂ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‍ಗಳನ್ನು ಧರಿಸುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘನೆ ಮಾಡಿದಲ್ಲಿ ದಂಡನಾ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.
0 comments:
Post a Comment