ಮೂಡಬಿದ್ರೆ (ಕರಾವಳಿ ಟೈಮ್ಸ್) : ಕೊರೋನಾ ವಾರಿಯರ್ಸ್ ಆಗಿ ಪರಿಗಣಿಸಿ, ಕರ್ತವ್ಯಕ್ಕೆ ತೆರಳುವ ಬಸ್ಸು ಸಿಬ್ಬಂದಿಗಳಿಗೆ ಪೂರ್ಣ ರಕ್ಷಣೆ ಖಾತ್ರಿ ಪಡಿಸಿ, ಬೀದಿಗಿಳಿಸದ ಬಸ್ಸುಗಳ ನೌಕರರಿಗೆ ಅರ್ಧ ವೇತನ ನೀಡಿ, ಲಾಕ್‍ಡೌನ್ ಅವಧಿಯಲ್ಲಿ ಉದ್ಯೋಗ ವಂಚಿತರಾದ ನೌಕರರಿಗೆ ತಿಂಗಳಿಗೆ ತಲಾ ಐದು ಸಾವಿರ ರೂಪಾಯಿಯಂತೆ ತಾತ್ಕಾಲಿಕ ಪರಿಹಾರ ತಕ್ಷಣ ಒದಗಿಸಿ, ಬಸ್ಸು ನೌಕರರ ಸಮಸ್ಯೆ ಆಲಿಸಲು ವಿಶೇಷ ಸಭೆ ಕರೆಯಿರಿ ಎಂದು ಮೂಡಬಿದ್ರೆ ವಲಯ ಬಸ್ಸು ಚಾಲಕ-ನಿರ್ವಾಹಕರು ಆಗ್ರಹಿಸಿದ್ದಾರೆ.
ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆದ ಚಾಲಕ-ಮಾಲಕರ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು. ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆರಂಭಗೊಂಡ ನಂತರ ದಕ್ಷಿಣ ಪೂರ್ವ ವಲಯದಲ್ಲಿ ಖಾಸಗಿ ಬಸ್ಸುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಬಸ್ಸು ನೌಕರರು ಕೆಲಸವಿಲ್ಲದೆ ಬದುಕು ದುಸ್ಥರಗೊಂಡಿದೆ. ಮಾಲಕರಾಗಲಿ, ಸರಕಾರವಾಗಲಿ ಯಾವುದೇ ರೀತಿಯ ನೆರವು ನೀಡದಿರುವುದರಿಂದ ಕುಟುಂಬದ ದೈನಂದಿನ ಖರ್ಚು-ವೆಚ್ಚಗಳನ್ನು ಭರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಬಸ್ಸು ನೌಕರರಿಗೆ ನ್ಯಾಯಯುತ ಪರಿಹಾರ ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬಳಿಕ ಪರಿಹಾರಕ್ಕಾಗಿ ಸರಕಾರಕ್ಕೆ ಮನವಿ ನೀಡಲು ತೀರ್ಮಾನಿಸಲಾಯಿತು.
ಇದರ ಭಾಗವಾಗಿ ಬಸ್ಸು ನೌಕರರಿಂದ ಸಹಿ ಸಂಗ್ರಹ ಮಾಡಿ ಬಸ್ಸು ಮಾಲಕರ ಸಂಘ ಹಾಗೂ ಕ್ಷೇತ್ರದ ಶಾಸಕ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯವರ ಮೂಲಕ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕೆ.ಪಿ.ಆರ್.ಎಸ್. ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ , ಯುವ ವಕೀಲರಾದ ರಿಝ್ವಾನ್, ಡಿವೈಎಫ್‍ಐ ಮೂಡಬಿದ್ರೆ ತಾಲೂಕು ಕಾರ್ಯದರ್ಶಿ ರಿಯಾಝ್ ಮಾಂತೂರು, ಹಿರಿಯ ಬಸ್ಸು ನೌಕರರಾದ ಸದಾನಂದ ದರೆಗುಡ್ಡೆ ಹಾಗೂ ಹಲವು ಪ್ರಮುಖ ಬಸ್ಸು ನೌಕರರು ಭಾಗಿಯಾಗಿದ್ದರು.
0 comments:
Post a Comment