ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ |
ಬಂಟ್ವಾಳ (ಕರಾವಳಿ ಟೈಮ್ಸ್) : ಬಡ ಅಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರಕಾರ ಕೊರೋನಾ ಲಾಕ್ ಡೌನ್ ಸಂಕಷ್ಟ ಎದುರಿಸಲು 5 ಸಾವಿರ ರೂಪಾಯಿ ಏಕ ಕಂತಿನ ಪರಿಹಾರ ಧನ ಘೋಷಣೆ ಮಾಡಿರುವುದು ಅತ್ಯಂತ ಸ್ವಾಗತಾರ್ಹವಾಗಿದ್ದು, ಬಡ ಚಾಲಕರ ಹಿತ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಹೆಯಾಗಿದೆ. ಆದರೆ ಈ ಪರಿಹಾರ ಮೊತ್ತ ಪಡೆಯಲು ಚಾಲಕರು ಬ್ಯಾಡ್ಜ್ ಹೊಂದಿರುವುದು ಕಡ್ಡಾಯ ಎಂಬ ನಿಯಮ ಸಡಿಲಿಸಿ ಬ್ಯಾಡ್ಜ್ ರಹಿತ ಬಡ ಚಾಲಕರನ್ನೂ ಈ ಯೋಜನೆಗೆ ಪರಿಗಣಿಸಬೇಕು ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಜಿಲ್ಲೆಯಲ್ಲಿ ಹಲವಾರು ಸಂಖ್ಯೆಯ ಬಡ ಚಾಲಕರು ಬ್ಯಾಡ್ಜ್ ಹೊಂದಿಲ್ಲ. ಕೆಲವೊಂದು ಕಾರಣಗಳಿಗೆ ಚಾಲಕರು ಬ್ಯಾಡ್ಜ್ ಪಡೆದುಕೊಳ್ಳಲು ವಿಳಂಬವಾಗಿದ್ದು, ಕೇವಲ ಡ್ರೈವಿಂಗ್ ಲೈಸೆನ್ಸ್ ಹೊಂದಿ ಅಟೋ ರಿಕ್ಷಾ ಹಾಗೂ ಟ್ಯಾಕ್ಸಿ ಓಡಿಸಿ ಸಂಸಾರ ಬಂಡಿ ಎಳೆಯುತ್ತಿದ್ದಾರೆ. ಸರಕಾರ ಸದ್ಯ ಘೋಷಿಸಿರುವ ಪರಿಹಾರ ಮೊತ್ತ ಪಡೆಯಲು ಬ್ಯಾಡ್ಜ್ ಕಡ್ಡಾಯ ಎಂಬ ನಿಯಮ ರೂಪಿಸಿರುವುದರಿಂದ ಇಂತಹ ಚಾಲಕರು ಪರಿಹಾರದಿಂದ ವಂಚಿತರಾಗುತ್ತಾರೆ. ಇಂತಹ ಚಾಲಕರು ಈ ಪರಿಹಾರದಿಂದ ವಂಚಿತರಾದರೆ ಸಮಾಜದ ಬಡ ಹಾಗೂ ತಳ ಮಟ್ಟದ ಜನರಿಗೆ ಸರಕಾರದ ಯೋಜನೆ ತಲುಪುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರ ನಿಯಮದಲ್ಲಿ ಸಡಿಲಿಕೆ ಮಾಡಿ ಲೈಸನ್ಸ್ ಹೊಂದಿದ ಬ್ಯಾಡ್ಜ್ ರಹಿತ ಬಡ ಚಾಲಕರಿಗೂ ತಾವು ದುಡಿಯುತ್ತಿರುವ ವಾಹನದ ವಿವರದ ಮೇರೆಗೆ ಪರಿಹಾರಧನ ದೊರೆಯುವಂತೆ ನೋಡಿಕೊಳ್ಳುವ ಮೂಲಕ ಸರಕಾರ ತನ್ನ ಯೋಜನೆಯ ಲಾಭ ಅರ್ಹವಾಗಿ ತಲುಪುವವರಿಗೆ ತಲುಪುವಂತೆ ಖಚಿತಪಡಿಸಬೇಕು ಎಂದು ಬೇಬಿ ಕುಂದರ್ ಆಗ್ರಹಿಸಿದ್ದಾರೆ.
ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಬಾಡ್ಜ್ ರಹಿತ ಚಾಲಕರ ಹಿತರಕ್ಷಣೆಗೆ ಜಿಲ್ಲೆಯ ಸಂಸದರ ಸಹಿತ ಎಲ್ಲಾ ಶಾಸಕರುಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಸರಕಾರಕ್ಕೆ ಒತ್ತಡ ತಂದು ನಿಯಮ ಸಡಿಲಿಕೆಗೆ ಒತ್ತಾಯಿಸಬೇಕು ಹಾಗೂ ಆ ಮೂಲಕ ಜಿಲ್ಲೆಯ ಬಡ ಚಾಲಕ ವರ್ಗದ ಹಿತ ಕಾಪಾಡಬೇಕು ಎಂದು ಬೇಬಿ ಕುಂದರ್ ಆಗ್ರಹಿಸಿದ್ದಾರೆ.
0 comments:
Post a Comment