ಬಂಟ್ವಾಳ (ಕರಾವಳಿ ಟೈಮ್ಸ್) : ಕಳೆದ ಎರಡು ವರ್ಷಗಳಿಂದ ತಾಲೂಕಿನಾದ್ಯಾಂತ ಎಗ್ಗಿಲ್ಲದೆ ನಡೆಯುತ್ತಿರುವ ಆಕ್ರಮ ಮರಳುಗಾರಿಕೆ ಸಹಿತ ಇತರ ಆಕ್ರಮ ಚಟುವಟಿಕೆಗಳಿಗೆ ಶಾಸಕರ ಕೃಪಾಕಟಾಕ್ಷವೇ ಪ್ರೇರಣೆ. ರಾಜಧರ್ಮ ಪಾಲನೆಯ ಬಗ್ಗೆ ಮಾತಾಡುತ್ತಿರುವ ಶಾಸಕರಿಗೆ ರಾಜಧರ್ಮ ನೀತಿಯ ಅರ್ಥವೇ ತಿಳಿಯದಿರುವುದು ನಿಜಕ್ಕೂ ದುರಂತ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ತಾಲೂಕಿನಲ್ಲಿ ನಡೆಯುತ್ತಿರುವ ಆಕ್ರಮ ಮರಳುಗಾರಿಕೆಯ ಬಗ್ಗೆ ಬಿಜೆಪಿ ಮುಖಂಡರು ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಅಕ್ರಮ ಮರಳುಗಾರಿಕೆಯಿಂದ ತಾಲೂಕಿನ ಬಡಜನತೆ ಸಂಕಷ್ಟಕ್ಕೀಡಾಗಿದ್ದರೂ ಕ್ಷೇತ್ರದ ಶಾಸಕರು ಮೌನ ಧೋರಣೆ ತಾಳಿರುವುದು ತೀರಾ ಬೇಜವಾಬ್ದಾರಿ ನಡೆ ಎಂದು ಆರೋಪಿಸಿದ್ದಾರೆ.
ತಾಲೂಕಿನಾದ್ಯಂತ ಅಕ್ರಮ ಮರಳುಗಾರಿಕೆ ಮತ್ತು ಅಕ್ರಮ ಚಟುವಟಿಕೆಗಳು ಕಳೆದ ಎರಡು ವರ್ಷಗಳಿಂದ ರಾಜಾರೋಷವಾಗಿ ನಡೆಯುತ್ತಿದ್ದು, ಮರಳಿನ ದರ ಏರಿಕೆಯಾಗಿ ಬಡವರಿಗೆ ಮನೆ ಕಟ್ಟಲು, ಕಟ್ಟಡ ನಿರ್ಮಿಸಲು ಸಂಕಷ್ಟ ಪಡುವಂತಾಗಿದೆ. ಆದರೆ ಕ್ಷೇತ್ರದ ಶಾಸಕರು ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಎರಡು ವರ್ಷಗಳಿಂದ ಅಕ್ರಮ ಮರಳುಗಾರಿಕೆ ಮತ್ತು ಅಕ್ರಮ ಚಟುವಟಿಕೆ ಎಗ್ಗಿಲ್ಲದೆ ಸಾಗುವಲ್ಲಿ ಸ್ಥಳೀಯ ಶಾಸಕರ ಕೃಪಾಕಟಾಕ್ಷ ಇರುವುದು ಅವರ ಪಕ್ಷದ ನಾಯಕರಿಂದಲೇ ಇದೀಗ ಸಾಬೀತಾಗಿದೆ. ರಮಾನಾಥ ರೈ ಅವರು ಮಾಡಿರುವ ಆರೋಪ ನಿಜವೆಂಬುದನ್ನು ಒಪ್ಪಿಕೊಂಡಿರುವ ಬಿಜೆಪಿ ನಾಯಕರು ರಮಾನಾಥ ರೈ ಅವರು ಸೂಚಿಸಿದ ಪ್ರದೇಶಗಳಲ್ಲಿ ಮಾತ್ರ ಅಕ್ರಮ ಮರಳುಗಾರಿಕೆ ಇರುವುದಲ್ಲ. ಇನ್ನೂ ಹಲವು ಕಡೆ ನಡೆಯುತ್ತಿದೆ ಎಂದು ಪರೋಕ್ಷವಾಗಿ ತಮ್ಮ ಹೇಳಿಕೆಗಳಲ್ಲಿ ಒಪ್ಪಿಕೊಂಡಿದ್ದಾರೆ. ತಾಲೂಕಿನ ಎಲ್ಲೇ ಅಕ್ರಮ ಮರಳುಗಾರಿಕೆ ಇದ್ದರೂ ಅದನ್ನು ಅಧಿಕಾರದಲ್ಲಿರುವ ಶಾಸಕರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಬದಲಾಗಿ ಶಾಸಕರ ತಪ್ಪನ್ನು ಮರೆಮಾಚಲು ಬಿಜೆಪಿ ಮುಖಂಡರು ಇದೀಗ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ಮೇಲೆ ಅಪಪ್ರಚಾರಕ್ಕೆ ಇಳಿದಿದ್ದಾರೆ. ರೈಯವರ ವ್ಯಕ್ತಿತ್ವ, ಪ್ರಾಮಾಣಿಕತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರು ಸಲ್ಲಿಸಿದ ಸೇವೆಯ ಬಗ್ಗೆ ಕ್ಷೇತ್ರದ ಜನತೆಗೆ ಗೊತ್ತಿದೆ. ಆರು ಬಾರಿ ಶಾಸಕರಾಗಿ ಆಯ್ಕೆ ಆಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ನಾಯಕರಿಗೆ ಇನ್ನೊಬ್ಬರ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಬೇಬಿ ಕುಂದರ್ ತಿರುಗೇಟು ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿಗರು ರಮಾನಾಥ ರೈಯವರ ವಿರುದ್ಧ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಹೊರಿಸಿ, ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಗೆಲುವು ಸಾಧಿಸಿದರು. ಆದರೆ ಗೆದ್ದ ಮೇಲೆ ಜನರ ಸಂಕಷ್ಟ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಈಗ ಜನರೇ ಮಾತಾಡುತ್ತಿದ್ದಾರೆ. ಇದನ್ನು ಮರೆಮಾಚಲು ರಾಜೇಶ್ ನಾಯ್ಕ್ ಅವರು ಪಕ್ಷದ ಮುಖಂಡರಿಂದ ರಮಾನಾಥ ರೈ ವಿರುದ್ಧ ಅಪಪ್ರಚಾರ ಮಾಡಿಸುತ್ತಿದ್ದಾರೆ ಎಂದು ಬೇಬಿ ಕುಂದರ್ ಆರೋಪಿಸಿದ್ದಾರೆ.
ರಾಜಧರ್ಮದ ಬಗ್ಗೆ ಅರಿವಿಲ್ಲದ ಶಾಸಕ ರಾಜೇಶ್ ನಾಯಕ್ ಅವರು ರಾಜ ಧರ್ಮದ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ಜನತೆಯ ಕಷ್ಟಕ್ಕೆ ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಪ್ರಾಮಾಣಿಕವಾಗಿ ಸ್ಪಂದಿಸುವುದೇ ನಿಜವಾದ ರಾಜಧರ್ಮ. ಅಂತಹ ಮಾನವೀಯ ಧರ್ಮವನ್ನು ರಮಾನಾಥ ರೈ ತನ್ನ ಅಧಿಕಾರಾವಧಿಯಲ್ಲಿ ಪಾಲಿಸಿದ್ದಾರೆ, ಈಗಲೂ ಪಾಲಿಸುತ್ತಿದ್ದಾರೆ. ಅವರ ನಿರಂತರ ಜನಸೇವೆಯ ಕೈಂಕರ್ಯವನ್ನು ಸಹಿಸಲಾಗದೇ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿಗರ ಹತಾಶ ಭಾವನೆಯನ್ನು ಕ್ಷೇತ್ರದ ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಬೇಬಿ ಕುಂದರ್ ಹೇಳಿದ್ದಾರೆ.
ಹಿಂದಿನಿಂದಲೂ ಅಕ್ರಮ ಮರಳುಗಾರಿಕೆ ಮತ್ತು ಅಕ್ರಮ ಚಟುವಟಿಕೆಗಳನ್ನು ವಿರೋಧಿಸುತ್ತಾ ಬಂದಿರುವ ರಮಾನಾಥ ರೈ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಬಡವರಿಗೆ ಕಡಿಮೆ ದರದಲ್ಲಿ ಮರಳು ಸಿಗುವಂತೆ ಹಾಗೂ ಬಡ ಕುಟುಂಬಗಳು ಅಕ್ರಮ ಚಟುವಟಿಕೆಗಳಿಂದ ಬೀದಿ ಪಾಲಾಗುವುದನ್ನು ತಡೆಯುವಲ್ಲಿ ಪ್ರಾಮಾಣಿಕವಾದ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ಆಕ್ರಮ ಚಟುವಟಿಕೆಗಳ ವಿರುದ್ಧ ಶಾಸಕರು ತನ್ನ ಜವಾಬ್ಧಾರಿಯನ್ನು ಅರಿತು ಕ್ರಮ ಕೈಗೊಳ್ಳದಿರುವುದು ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ. ಇಂತಹ ಚಟುವಟಿಕೆಗಳ ವಿರುದ್ಧ ಕಾಂಗ್ರೆಸ್ ಮಾಜಿ ಸಚಿವರಾದ ರಮಾನಾಥ ರೈ ಅವರ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸಲಿದೆ ಎಂದು ಬೇಬಿ ಕುಂದರ್ ಎಚ್ಚರಿಸಿದ್ದಾರೆ.
0 comments:
Post a Comment