ಬೆಂಗಳೂರಿನಲ್ಲಿ ಕೇಳಿದ ಭಯಾನಕ ಶಬ್ದ ಭೂಕಂಪನ ಅಲ್ಲ ಎಂದ ತಜ್ಞರು - Karavali Times ಬೆಂಗಳೂರಿನಲ್ಲಿ ಕೇಳಿದ ಭಯಾನಕ ಶಬ್ದ ಭೂಕಂಪನ ಅಲ್ಲ ಎಂದ ತಜ್ಞರು - Karavali Times

728x90

20 May 2020

ಬೆಂಗಳೂರಿನಲ್ಲಿ ಕೇಳಿದ ಭಯಾನಕ ಶಬ್ದ ಭೂಕಂಪನ ಅಲ್ಲ ಎಂದ ತಜ್ಞರು



ಬೆಂಗಳೂರು (ಕರಾವಳಿ ಟೈಮ್ಸ್) : ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದು ಮಧ್ಯಾಹ್ನ ಭಯಾನಕ ಶಬ್ದ ಕೇಳಿಸಿದ್ದು, ಭೂಕಂಪನ ಎಂದು ತಿಳಿದ ಜನತ ಬೆಚ್ಚಿ ಬಿದ್ದಿದ್ದಲ್ಲದೆ ಭಯದಿಂದ ಮನೆಗಳಿಂದ ಹೊರಗೋಡಿ ಬಂದಿದ್ದಾರೆ.

ಮಧ್ಯಾಹ್ನ ಸುಮಾರು 1.45ರ ವೇಳೆಗೆ ಸ್ಪೋಟದಂತಹ ಈ ಶಬ್ಧ ಬೆಂಗಳೂರಿನ ಬಹುತೇಕ ಕಡೆ ಕೇಳಿ ಬಂದಿದೆ. ಸರ್ಜಾಪುರ, ವೈಟ್‍ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಾರ್ತ ಹಳ್ಳಿ, ಇಂದಿರಾನಗರ, ಹೆಬ್ಬಾಳ, ಜೆ.ಪಿ. ನಗರ, ಕೆ.ಆರ್. ಪುರಂ ಸೇರಿದಂತೆ ಅನೇಕ ಕಡೆ ಈ ಶಬ್ದ ಕೇಳಿ ಬಂದಿದ್ದು, ಜನ ಭೀತಿಗೊಳ್ಳುವಂತೆ ಮಾಡಿದೆ. ಅನೇಕ ಮಂದಿ ಇದು ಭೂಕಂಪನ ಎಂದು ತಿಳಿದು ಆತಂಕಗೊಂಡರೆ, ಮತ್ತೆ ಕೆಲವರು ಇದು HALನಲ್ಲಿರುವ ಯುದ್ಧ ವಿಮಾನ ಮಿರಾಜ್ 2000 ಹಾರಾಟ ಮಾಡುವಾಗ ಕೇಳಿ ಬಂದ ಶಬ್ಧವಾಗಿರಬಹುದು ಎಂದು ಶಂಕಿಸಿದ್ದಾರೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ವೀಕ್ಷಣಾ ಕೇಂದ್ರ (Karnataka State Natural Disaster Monitoring Centre (KSNDMC)) ಅಧಿಕಾರಿಗಳು, ಜನ ಯಾವುದೇ ಭಯಪಡಬೇಕಾಗಿಲ್ಲ. ಬೆಂಗಳೂರಿನಲ್ಲಿ ಯಾವುದೇ ಭೂಕಂಪ ಸಂಭವಿಸಿಲ್ಲ ಎಂದು ಜನತೆಗೆ ಧೈರ್ಯ ತುಂಬಿದ್ದಾರೆ. ಹವಾಮಾನ ಬದಲಾವಣೆಯಿಂದ ಶಬ್ದ ಕೇಳಿಸುತ್ತದೆ. ಭೂಗರ್ಭದಲ್ಲಿ ಯಾವುದೇ ಕಂಪನ ಆಗಿಲ್ಲ. ಚಂಡಮಾರುತ ಚಲನೆ ಆದಾಗ ಹವಾಮಾನ ಬದಲಾವಣೆಯಾಗುತ್ತದೆ. ಹವಾಮಾನ ಬದಲಾವಣೆ ವೇಳೆ ಬಿಸಿಗಾಳಿ ಚಲನೆಯಾಗುತ್ತದೆ. ಬಿಸಿಗಾಳಿ ಚಲನೆಯಾದಾಗ ಸ್ಫೋಟ ಶಬ್ದ ಕೇಳಿಸುತ್ತದೆ. ಅಂಫಾನ್ ಚಂಡಮಾರುತದಿಂದ ಹವಾಮಾನ ಬದಲಾವಣೆಯಾಗಿರಬಹುದು. ಹೆಚ್ಚಿನ ಒತ್ತಡ, ಬಿಸಿ ಗಾಳಿಯ ಘರ್ಷಣೆಯಿಂದ ಶಬ್ಧ ಉಂಟಾಗುತ್ತದೆ ಎಂದಿದ್ದಾರೆ.

ಇನ್ನು ಈ ಕುರಿತಂತೆ KSNDMC ಸರಣಿ ಟ್ವೀಟ್ ಮಾಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ KSNDMC ನಿರ್ದೇಶಕ ಶ್ರೀನಿವಾಸರೆಡ್ಡಿ ಅವರು, ‘ಬೆಂಗಳೂರು ನಗರ ಪ್ರದೇಶದಲ್ಲಿ ಯಾವುದೇ ಭೂಕಂಪನ/ ಭೂಮಿ ನಡುಗಿದ ಬಗ್ಗೆ ವರದಿಯಾಗಿಲ್ಲ. ಭೂಕಂಪನ ಚಟುವಟಿಕೆಯು ಒಂದು ಪ್ರದೇಶಕ್ಕೆ ಸೀಮಿತವಾಗಿರದೇ ವ್ಯಾಪಕವಾಗಿರುತ್ತದೆ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಭೂಕಂಪನ ಮಾಪನ ಕೇಂದ್ರಗಳಲ್ಲಿ ಈ ಬಗ್ಗೆ ದಾಖಲಾಗಿಲ್ಲ ಎಂದು ಹೇಳಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬೆಂಗಳೂರಿನಲ್ಲಿ ಕೇಳಿದ ಭಯಾನಕ ಶಬ್ದ ಭೂಕಂಪನ ಅಲ್ಲ ಎಂದ ತಜ್ಞರು Rating: 5 Reviewed By: karavali Times
Scroll to Top