- ಡಿ.ಎಸ್.ಐ.ಬಿ ಪಾಣೆಮಂಗಳೂರು |
ಅಕ್ಕಿ, ಬೇಳೆ ಕೊಟ್ಟ ತಕ್ಷಣ ಅನ್ನ ಬೇಯಿಸಲು ಸಾಧ್ಯವಿಲ್ಲ. ಅದಕ್ಕೆ ಸಿಲಿಂಡರ್ ಅಗತ್ಯವಿದೆ. ಅದನ್ನು ಖರೀದಿಸಲು ಹಣವಿಲ್ಲ. ದಿನ ಬಳಸುವ ಔಷಧಿಗಳು ಖಾಲಿಯಾಗಿವೆ. ಅದನ್ನು ಖರೀದಿಸಲು ಅಥವಾ ಅಗತ್ಯವಾದ ಪ್ರತಿಯೊಂದನ್ನು ಖರೀದಿಸಲು ಕೂಡ ಹಣವಿಲ್ಲ. ಸ್ವತಃ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದೇವೆ, ತಿಂಗಳ ಬಾಡಿಗೆ ಕಟ್ಟಲು ಸಾಧ್ಯವಿಲ್ಲ. ಇನ್ನಿತರ ಹಣದ ಸಮಸ್ಯೆಯಲ್ಲಿದ್ದೇವೆ, ಹಣವಿಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಇದು ನನ್ನ ಜೀವನದ ಕಥೆಯಲ್ಲ, ಪ್ರತಿಯೊಂದು ಮನೆಯಲ್ಲಿ ಒಂದೊಂದು ಸಮಸ್ಯೆಯಲ್ಲಿರುವ ಪ್ರತಿಯೊಬ್ಬರ ನೈಜ ಚರಿತ್ರೆ. ಹೌದು ಯಾರು ಕೂಡ ಯಾರೊಂದಿಗೆ ಕೇಳುವಂತೆಯೂ, ಹೇಳುವಂತೆಯೂ ಇಲ್ಲದೆ ಕಷ್ಟಕರವಾಗಿ ಉಸಿರು ಬಿಡುತ್ತಿದ್ದಾರೆ ಅಷ್ಟೆ. ತನ್ನ ಪಾಡಿಗೆ ಒಂದು ದಿನವೂ ರಜೆ ಇಲ್ಲದೆ ಹಸಿವು ನೀಗಿಸಲು ಕಷ್ಟಪಟ್ಟು ದುಡಿದು ಜೀವನ ಸಾಗಿಸುತ್ತಿದ್ದ ಮಾನವ, ಇಂದು ಮನೆಯಲ್ಲಿ ಕುಳಿತು ಕಣ್ಣೀರು ಹಾಕಲು ಕೊರೊನ ಎಂಬ ವೈರಸ್ ಕಾರಣವಾಯಿತು. ಹೊರಗಡೆ ಬಂದು ದುಡಿಯುವಂತಿಲ್ಲ, ಮನೆಯೊಳಗೆ ಕುಳಿತರೆ ಹೊಟ್ಟೆಗಿಲ್ಲ. ಜೀವನದ ಸುಧಾರಣೆಗೆಂದು ಅಲ್ಪ ಸ್ವಲ್ಪ ಕೂಡಿಟ್ಟ ಹಣವೆಲ್ಲವು ಖಾಲಿಯಾಗಿದೆ. ಶ್ರೀಮಂತನಾದರೆ ದುಡಿಮೆ ಇಲ್ಲದಿದ್ದರೂ ಹೊಟ್ಟೆ ಪಾಡಿಗೆ ಅಥವಾ ಇನ್ನಿತರಕ್ಕೆ ಏನಾದರೂ ಸುಧಾರಿಸುವನು ಆದರೆ ಬಡವನಾದವನು ಏನು ಮಾಡಲು ಸಾಧ್ಯ.
ಕೆಲವರು ಹಸಿವು ನೀಗಿಸಲು ಆಹಾರ ಧಾನ್ಯಗಳನ್ನು ನೀಡುತ್ತಿದ್ದಾರೆ. ಆದರೆ, ರೋಗಿಗಳು ತಮ್ಮ ಜೀವ ಉಳಿಸಲು ಔಷಧಿ ಖರೀದಿಸಲು ಅಥವಾ ಇನ್ನಿತರ ಅವಶ್ಯಕತೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಕೊರೊನ ಎಂಬ ವೈರಸ್ ಹರಡಿದ ನಂತರ ಲಾಕ್‍ಡೌನ್ ಎಂಬ ಬಂಧನದಲ್ಲಿರುವ ಕೆಲವೊಂದು ಶ್ರೀಮಂತರನ್ನು ಬಿಟ್ಟರೆ ಉಳಿದ ಪ್ರತಿಯೊಬ್ಬರು ಕೂಡ ಬಡವರಾಗಿದ್ದಾರೆ. ಈ ವೈರಸ್ ಯಾರನ್ನು ಸಮೀಪಿಸುತ್ತವೆ, ಯಾವಾಗ ನಾಶಗೊಳ್ಳುತ್ತವೆ ಒಂದೂ ತಿಳಿಯದೆ ಮಾನವ ಮೌನವಾಗಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಕೆಲವೊಂದು ಮನೆಯಲ್ಲಿ ಸರಿಯಾದ ಆಹಾರವಿಲ್ಲದೆ ಹಸಿವಿನಿಂದ ಬಳಲುವ ಅದೆಷ್ಟೋ ಕುಟುಂಬಗಳಿವೆ. ತೀರಾ ಬಡವರಿಗಾದರೆ ಸಹಾಯ ಮಾಡುತ್ತಾರೆ, ಶ್ರೀಮಂತರಿಗೆ ಅದರ ಅವಶ್ಯಕತೆ ಇರುವುದಿಲ್ಲ. ಇನ್ನು ಇದರ ನಡುವೆ ಇರುವ ಮಧ್ಯಮ ವರ್ಗದವರನ್ನು ಕೆಲವರು ನೋಡುವುದಿಲ್ಲ. ಬಾಯಿ ಬಿಟ್ಟು ನೋವು ಹೇಳಲಾಗದೆ ದಿನ ದೂಡುತ್ತಿರುತ್ತಾರೆ. ಇನ್ನೂ ಕೆಲವರು ವಿದೇಶದಲ್ಲಿದ್ದಾರೆ ಅಂದ ತಕ್ಷಣ ಅವರಿಗೆ ಬೇಕಾದಷ್ಟು ಇರುತ್ತವೆ ಅಂದುಕೊಳ್ಳುತ್ತಾರೆ.
ಇನ್ನು ವಾಸಿಸಲು ಸ್ವತಃ ಮನೆಗಳಿಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಜನರ ಮೇಲೆ ಮಾಲಿಕರೇ ಕರುಣೆ ತೋರಿಸಿ. ಕೊರೊನ ಮುಂಚಿತ ದಿನಗಳಲ್ಲಿ ದುಡಿಮೆಯಲ್ಲಿದ್ದಾಗ ಸರಿಯಾಗಿ ಬಾಡಿಗೆ ಕಟ್ಟುತ್ತಿದ್ದವರು ಲಾಕ್‍ಡೌನ್ ನಂತರ ದುಡಿಮೆ ಇಲ್ಲದೆ ಪರದಾಡುತ್ತಿರುವಾಗ ಹೇಗೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತದೆ ಎಂದು ಅರಿತುಕೊಳ್ಳಿ. ಮಾನವೀಯ ದೃಷ್ಟಿಯಿಂದ ಬಾಡಿಗೆ ಮನ್ನಾ ಅಥವಾ ರಿಯಾಯಿತಿ ನೀಡಿದರೆ ಅವರಿಗೂ ಒಂದು ಅಲ್ಪ ಸ್ವಲ್ಪಮಟ್ಟಿಗೆ ಒತ್ತಡ ಕಡಿಮೆಯಾಗುತ್ತದೆ. ಅದು ಕೂಡ ನಿಮ್ಮಿಂದ ಸಾಧ್ಯವಿಲ್ಲದಿದ್ದರೆ ಒತ್ತಡ ಹೇರುವ ಮೂಲಕ ಅವರನ್ನು ಮಾನಸಿಕ ಒತ್ತಡದ ಸ್ಥಿತಿಗೆ ತಲುಪಿಸದಿರಿ.
ಇದು ಜಾತಿ, ಧರ್ಮ ನೋಡುವ ಸಮಯವಲ್ಲ, ಪರಸ್ಪರ ಒಂದಾಗಿ ಪ್ರತಿಯೊಂದು ಮನೆಯ ಕಷ್ಟ ನಷ್ಟಗಳಿಗೆ ಕೈ ಜೋಡಿಸುವ ಸಮಯವಾಗಿದೆ. ಪ್ರತಿ ಊರಿನ ಮಸೀದಿ, ಮಂದಿರ, ಚರ್ಚ್ ಇನ್ನಿತರ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಅರಿತು ಸಹಾಯ, ಸಹಕಾರ ನೀಡುವ ಅಗತ್ಯವಿದೆ. ನಿಮ್ಮ ಅಗತ್ಯದ ಸಂದರ್ಭದಲ್ಲಿ ಮಳೆ, ಬಿಸಿಲು ನೋಡದೆ ಮನೆ ಮನೆಗೂ ಭೇಟಿ ನೀಡಿದಾಗೆ ಜನರು ಸಂಕಷ್ಟಕ್ಕೆ ಸಿಲುಕಿ ಮನೆಯೊಳಗೆ ಇರುವಾಗ ನಿಮ್ಮ ಸಹಾಯ ಅತ್ಯಮೂಲ್ಯವಾಗಿದೆ. ಸರಕಾರವೂ ಪ್ರತಿಯೊಂದು ಮನೆಗೂ ಸೂಕ್ತ ಪರಿಹಾರಗಳನ್ನು ಒದಗಿಸಿ, ಜನತೆಗೆ ಶಾಶ್ವತ ಪರಿಹಾರ ನೀಡಬೇಕಾಗಿದೆ.
0 comments:
Post a Comment