ಮಂಗಳೂರು (ಕರಾವಳಿ ಟೈಮ್ಸ್) : ನಗರದ ಹೊರವಲಯದ ಪಡೀಲ್ ಬಳಿಯ ಫಸ್ಟ್ ನ್ಯೂರೋ ಆಸ್ಪತ್ರೆ ಲಿಂಕ್ ಮೂಲಕ ಕೊರೋನಾ ಸೋಂಕಿತರಾಗಿದ್ದವರ ಸಾವಿನ ಸರಣಿ ಮುಂದುವರಿದಿದೆ. ಬೋಳೂರು ನಿವಾಸಿ 58 ವರ್ಷದ ಮಹಿಳೆ ಇಂದು ಕೋವಿಡ್-19 ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಈ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ.
ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಈ ಸಂದರ್ಭ ಎಪ್ರಿಲ್ 30 ರಂದು ಇವರಿಗೆ ಇಲ್ಲಿ ಕೊರೊನಾ ಸೋಂಕು ಹರಡಿರುವುದು ದೃಢಪಟ್ಟಿತ್ತು. ಬಳಿಕ ಇವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ. ಈಗಾಗಲೇ ಫಸ್ಟ್ ನ್ಯೂರೋ ಸಂಪರ್ಕದಿಂದ ಬಂಟ್ವಾಳದ ಮೂವರು ಸೋಂಕಿತರು ಬಲಿಯಾಗಿದ್ದಾರೆ.
ಫಸ್ಟ್ ನ್ಯೂರೋ ಸಂಪರ್ಕ : ಮತ್ತೊಂದು ಪಾಸಿಟಿವ್ ಪ್ರಕರಣ
ಬುಧವಾರ ಮತ್ತೆ ಫಸ್ಟ್ ನ್ಯೂರೋ ಸಂಪರ್ಕದಿಂದ ಉಳ್ಳಾಲದ ಸೋಮೇಶ್ವರದ ದಾರಂದಬಾಗಿಲು ಪ್ರದೇಶದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಹಿಳೆಗೆ ಫಸ್ಟ್‍ನ್ಯೂರೋ ಸಂಪರ್ಕದಿಂದ ಸೋಂಕು ತಗುಲಿದ್ದ ರೋಗಿ ಸಂಖ್ಯೆ ಪಿ-507 ಸಂಪರ್ಕದಿಂದ ಸೋಂಕು ತಗುಲಿದ್ದು, ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ವೆನ್ಲಾಕ್ ಕೊರೊನಾ ಆಸ್ಪತ್ರೆಗೆ ರವಾನಿಸಲಾಗಿದೆ.
ಫಸ್ಟ್‍ನ್ಯೂರೋದಲ್ಲಿ ಚಿಕಿತ್ಸೆ ಪಡೆದಿದ್ದ ವೃದ್ಧೆ ಮತ್ತು ಸೊಸೆ ಕೊರೊನಾದಿಂದಾಗಿ ಮೃತಪಟ್ಟ ಬಳಿಕ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿತ್ತು. ಇದೀಗ ಇಂದು ಸೋಂಕು ದೃಢಪಟ್ಟ ಮಹಿಳೆಯ ಊರಾದ ಸೋಮೇಶ್ವರದ ದಾರಂದಬಾಗಿಲು ಪ್ರದೇಶವನ್ನೂ ಸೀಲ್‍ಡೌನ್ ಮಾಡುವ ತಯಾರಿ ನಡೆಯುತ್ತಿದೆ. ಫಸ್ಟ್ ನ್ಯೂರೋ ಸಂಪರ್ಕದಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದೆ.
0 comments:
Post a Comment