ಪಶ್ಚಿಮ ಬಂಗಾಳದಲ್ಲಿ ತೀವ್ರ ಹೊಡೆತ ನೀಡಿದ ಅಂಫಾನ್ ಸೈಕ್ಲೋನ್ : ನೀರಿನಲ್ಲಿ ಮುಳುಗಿದ ಕೋಲ್ಕತ್ತಾ ವಿಮಾನ ನಿಲ್ದಾಣ - Karavali Times ಪಶ್ಚಿಮ ಬಂಗಾಳದಲ್ಲಿ ತೀವ್ರ ಹೊಡೆತ ನೀಡಿದ ಅಂಫಾನ್ ಸೈಕ್ಲೋನ್ : ನೀರಿನಲ್ಲಿ ಮುಳುಗಿದ ಕೋಲ್ಕತ್ತಾ ವಿಮಾನ ನಿಲ್ದಾಣ - Karavali Times

728x90

21 May 2020

ಪಶ್ಚಿಮ ಬಂಗಾಳದಲ್ಲಿ ತೀವ್ರ ಹೊಡೆತ ನೀಡಿದ ಅಂಫಾನ್ ಸೈಕ್ಲೋನ್ : ನೀರಿನಲ್ಲಿ ಮುಳುಗಿದ ಕೋಲ್ಕತ್ತಾ ವಿಮಾನ ನಿಲ್ದಾಣ






ಕೋಲ್ಕತ್ತಾ (ಕರಾವಳಿ ಟೈಮ್ಸ್) : ಅಂಫಾನ್ ಸಕ್ಲೋನ್ ಪಶ್ಚಿಮ ಬಂಗಾಳದಲ್ಲಿ ತೀವ್ರ ಹೊಡೆತ ನೀಡಿದ್ದು, ಕೋಲ್ಕತ್ತಾ ವಿಮಾನ ನಿಲ್ದಾಣ ನೀರಿನಲ್ಲಿ ಮುಳುಗಿ ಹೋಗಿದೆ. ಇಲ್ಲಿನ ಭೀಕರ ದೃಶ್ಯಗಳು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೋಲ್ಕತ್ತಾ ವಿಮಾನ ನಿಲ್ದಾಣ ಬಹುತೇಕ ನೀರಿನಿಂದ ಆವೃತವಾಗಿದ್ದು, ವಿಮಾನಗಳು ನದಿಯಲ್ಲಿ ಲ್ಯಾಂಡ್ ಆದಂತೆ ಗೋಚರವಾಗುತ್ತಿದೆ. ರನ್ ವೇ ಹೊರತುಪಡಿಸಿ ವಿಮಾನ ನಿಲ್ದಾಣದ ಬಹುತೇಕ ಪ್ರದೇಶಗಳಿಗೆ ನೀರು ನುಗ್ಗಿದೆ. ಚಂಡಮಾರುತದ ಆರ್ಭಟಕ್ಕೆ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ನಾಶಗೊಂಡಿದ್ದು, ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಕೋಲ್ಕತಾದಲ್ಲಿ ಅನೇಕ ಕಟ್ಟಡಗಳು ನೆಲಕಚ್ಚಿವೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ 6.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಹಾಗೂ ಒಡಿಶಾದಲ್ಲಿ 1.58 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಬುಧವಾರ ಮಧ್ಯಾಹ್ನ 2.30ಕ್ಕೆ ಅಂಫಾನ್ ಚಂಡಮಾರುತವು ಪಶ್ಚಿಮ ಬಂಗಾಳದ ದಿಘಾ ಹಾಗೂ ಬಾಂಗ್ಲಾದೇಶದ ಹಟಿಯಾ ದ್ವೀಪದ ನಡುವೆ ಅಪ್ಪಳಿಸಿದೆ. ಮೊದಲು 170 ಕಿಮೀ ವೇಗದಲ್ಲಿದ್ದ ಚಂಡಮಾರುತ ಬಳಿಕ 185 ಕಿಮೀ ವೇಗ ಪಡೆದುಕೊಂಡು ಮುನ್ನುಗ್ಗಿದೆ. ಈ ಹಿನ್ನೆಲೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆ. ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಹೌರಾ ಜಿಲ್ಲೆ ಹಾಗೂ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.

ಪ್ರತಿ ಗಂಟೆಗೆ 165 ಕಿಲೋ ಮೀಟರ್ ವೇಗದಲ್ಲಿ ಅಂಫಾನ್ ಬೀಸುತ್ತಿದೆ. ಈ ರೀತಿಯ ಸೈಕ್ಲೋನ್ ಜೀವನದಲ್ಲಿಯೇ ನೋಡಿರಲಿಲ್ಲ ಎಂದು ಪಶ್ಚಿಮ ಬಂಗಾಳದ ಜನರು ಹೇಳುತ್ತಿದ್ದಾರೆ. ಕೆಲ ಹಿರಿಯರು 30 ವರ್ಷಗಳ ಹಿಂದೆ ಇದೇ ಚಂಡಮಾರುತ ಅಪ್ಪಳಿಸಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.

ಅಂಫಾನ್ ಸೈಕ್ಲೋನ್‍ಗೆ ಸಿಲುಕಿರೋ ಪಶ್ಚಿಮ ಬಂಗಾಳದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕೊರೊನಾ ಮಧ್ಯೆ ಅಂಫಾನ್ ಸೈಕ್ಲೋನ್ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಓಡಿಶಾ ಮತ್ತು ಪಶ್ವಿಮ ಬಂಗಾಳದಲ್ಲಿ ಅಂಫಾನ್ ಭೀಕತೆಗೆ ಈಗಾಗಲೇ 12 ಮಂದಿ ಸಾವನ್ನಪ್ಪಿದ್ದಾರೆ.

ವಿಮಾನ ಹಾರಾಟ ಪುನರಾರಂಭ


ಚಂಡಮಾರುತದ ಪರಿಣಾಮ ಕೋಲ್ಕತಾ ವಿಮಾನ ನಿಲ್ದಾಣ ಸುತ್ತಲೂ ನೀರು ತುಂಬಿಕೊಂಡು ಪ್ರವಾಹದಂತಹ ಪರಿಸ್ಥಿತಿ ಎದುರಾಗಿತ್ತು. ಇದೀಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನದಿಂದ ಮತ್ತೆ ಪರಿಹಾರ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ತಿಳಿದು ಬಂದಿದೆ.

ಥಾಯ್ ಮತ್ತು ರಷ್ಯಾದ ನಾಗರಿಕರಿಗಾಗಿ ಎರಡು ಪರಿಹಾರ ವಿಮಾನಗಳು ಮಧ್ಯಾಹ್ನದ ವೇಳೆಗೆ ಕಾರ್ಯಾಚರಣೆ ಆರಂಭಿಸಿವೆ. ಥಾಯ್ ನಾಗರಿಕರಿಗಾಗಿ ಒಂದು ಏರ್ ಏಷ್ಯಾ ವಿಮಾನ ಇರಲಿದ್ದು, ಈಗಾಗಲೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ  ಬರಲು ಆರಂಭಿಸಿದ್ದಾರೆ. ಮಧ್ಯಾಹ್ನ, ರಷ್ಯಾದ ನಾಗರಿಕರಿಗಾಗಿ ಮತ್ತೊಂದು ವಿಮಾನವು ಹೊರಡಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಕೌಶಿಕ್ ಭಟ್ಟಾಚಾರ್ಜಿ ಮಾಹಿತಿ ನೀಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಪಶ್ಚಿಮ ಬಂಗಾಳದಲ್ಲಿ ತೀವ್ರ ಹೊಡೆತ ನೀಡಿದ ಅಂಫಾನ್ ಸೈಕ್ಲೋನ್ : ನೀರಿನಲ್ಲಿ ಮುಳುಗಿದ ಕೋಲ್ಕತ್ತಾ ವಿಮಾನ ನಿಲ್ದಾಣ Rating: 5 Reviewed By: karavali Times
Scroll to Top