ಇನ್ನೆಂದೂ ಇಂತಹ ಘಟನೆ ನಡೆಯದಂತೆ ಕಠಿಣ ಕ್ರಮಕ್ಕೆ ಪೊಲೀಸರಿಗೆ ಆಗ್ರಹ
ಬಂಟ್ವಾಳ (ಕರಾವಳಿ ಟೈಮ್ಸ್) : ವಿಟ್ಲ ಸಮೀಪದ ಕಾಡುಮಠ ಎಂಬಲ್ಲಿ ಅಪ್ರಾಪ್ತ ಬಾಲಕನ ಮೇಲೆ ಕೆಲವೊಂದು ಕೋಮುವಾದಿ ಕಾರಣಗಳನ್ನು ಇಟ್ಟುಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ ಕ್ರಮ ಅತ್ಯಂತ ಖಂಡಿನೀಯವಾಗಿದ್ದು, ಇಂತಹ ನೈತಿಕ ಪೊಲೀಸ್‍ಗಿರಿ ಇನ್ನು ಮುಂದೆ ಎಲ್ಲಿಯೂ ನಡೆಯದಂತೆ ಪೊಲೀಸರು ಕಠಿನ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಆಗ್ರಹಿಸಿದ್ದಾರೆ.
ಗಂಭೀರ ಹಲ್ಲೆ ನಡೆಸಿದ್ದಲ್ಲದೆ, ಘಟನೆಯನ್ನು ವೀಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಹಲ್ಲೆ ನಡೆಸಿರುವುದೇ ಅಕ್ಷಮ್ಯ, ಅದರ ಮಧ್ಯೆ ವೀಡಿಯೋ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಅಪ್ರಾಪ್ತ ಬಾಲಕನ ಹಾಗೂ ಕುಟುಂಬದ ಮಾನಕ್ಕೂ ಹಾನಿ ಉಂಟು ಮಾಡಲಾಗಿದೆ. ಇದು ಇಡೀ ಕುಟುಂಬದ ಮನಸ್ಸಿಗೆ ಅತ್ಯಂತ ಹೆಚ್ಚಿನ ಘಾಸಿ ಉಂಟುಮಾಡಲಾಗಿದೆ ಎಂದಿರುವ ಅಬ್ಬಾಸ್ ಅಲಿ ಘಟನೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ದಿಟ್ಟ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ. ಆದರೆ ಪೊಲೀಸರು ಕಠಿಣ ಕಲಂಗಳನ್ನು ವಿಧಿಸುವ ಆರೋಪಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವ ಮೂಲಕ ಇನ್ನೆಲ್ಲಿಯೂ ಇಂತಹ ನೈತಿಕ ಪೊಲೀಸ್‍ಗಿರಿ ನಡೆಸುವ ಕೃತ್ಯ ನಡೆಯಬಾರದು ಎಂದು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಇನ್ನು ಮುಂದಕ್ಕೆ ಕಾನೂನು ಕೈಗೆತ್ತಿಕೊಳ್ಳುವ ದುಷ್ಕರ್ಮಿಗಳು, ರೌಡಿ ಶೀಟರ್‍ಗಳನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿ ಸಂಪೂರ್ಣವಾಗಿ ನಿಯಂತ್ರಿಸುವ ಮೂಲಕ ಸಮಾಜದ ಹಿತ ಕಾಪಾಡುವ ಮೂಲಕ ಸಾಮಾಜಿಕ ಶಾಂತಿ, ನೆಮ್ಮದಿಯನ್ನು ಕಾಪಾಡುವಲ್ಲಿ ಪ್ರಯತ್ನಿಸಬೇಕು ಎಂದು ತಾ ಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಆಗ್ರಹಿಸಿದ್ದಾರೆ.
0 comments:
Post a Comment