ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಸರಕಾರ ಹಾಗೂ ಜಿಲ್ಲಾಡಳಿತ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದು, ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಫೋರಂ ರಾಜ್ಯ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ಅವರು ಶನಿವಾರ ಜಿಲ್ಲೆಯಲ್ಲಿ ಮತ್ತೆ 3 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 31ಕ್ಕೇರಿಯಾಗಿದೆ. ಸೋಂಕಿತರ ಪೈಕಿ ಬಂಟ್ವಾಳ ಒಂದೇ ಪ್ರದೇಶಕ್ಕೆ ಸೇರಿದ 3 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಇದು ಸಹಜವಾಗಿಯೇ ಜಿಲ್ಲೆಯ ಜನರಲ್ಲಿ ಆತಂಕ ಹಾಗೂ ಭಯವನ್ನು ಮೂಡಿಸಿದೆ.
ದಿನದಿಂದ ದಿನಕ್ಕೆ ಕೊರೋನ ಎಂಬ ಮಹಾ ಮಾರಿಯು ಜಿಲ್ಲೆಯ ಜನತೆಯನ್ನು ಗಾಬರಿಗೀಡುಮಾಡುತ್ತಿದ್ದರೂ ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರು ತಮ್ಮ ತಮ್ಮ ಮನೆಗಳಲ್ಲಿ ಲಾಕ್‍ಡೌನ್ ಆದೇಶವನ್ನು ಪಾಲನೆ ಮಾಡುತ್ತಿದ್ದು ಜಿಲ್ಲೆಯ ಜನತೆಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ.
ಆರಂಭದಿಂದಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದ ಕ್ರಮ ಸರಿಯಾಗಿಲ್ಲ. ಫಸ್ಟ್ ನ್ಯೂರೋ ಆಸ್ಪತ್ರೆ ಕೇಂದ್ರೀಕರಿಸಿಕೊಂಡು ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು ಜಿಲ್ಲೆಯ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಸರಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಬೂಬಕ್ಕರ್ ಸಜಿಪ ಆಗ್ರಹಿಸಿದ್ದಾರೆ.
ಜಿಲ್ಲೆಯ ಜನತೆಗೆ ಮದ್ಯಪಾನ, ಬಟ್ಟೆ-ಬರೆ ಇದ್ಯಾವುದೂ ಆದ್ಯತೆ ಆಗಿಲ್ಲ. ಹೊರತು ಜನರ ಆರೋಗ್ಯದ ರಕ್ಷಣೆ ಹಾಗೂ ಜಿಲ್ಲೆಯನ್ನು ಕೊರೋನಾ ಮುಕ್ತವಾಗಿಸುವುದು ಜನರ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನ ಆರಂಭದಿಂದಲೂ ಜಿಲ್ಲಾಡಳಿತದೊಂದಿಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದು, ಸೋಂಕು ನಿವಾರಣೆ ನಿಟ್ಟಿನಲ್ಲಿ ಇನ್ನಷ್ಟು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾದಲ್ಲಿ ಜಿಲ್ಲೆಯ ಜನ ತಮ್ಮ ಸಹಕಾರವನ್ನು ಮುಂದುವರಿಸಲಿದ್ದಾರೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment