ಬಳ್ಳಾರಿ (ಕರಾವಳಿ ಟೈಮ್ಸ್) : ಕೋವಿಡ್-19 ಸೋಂಕು ನಿಯಂತ್ರಣ ವಿಚಾರದಲ್ಲಿ ಸಹಕಾರ ನೀಡದೇ ತಮ್ಮದೇ ಶೈಲಿಯಲ್ಲಿ ವರ್ತಿಸುತ್ತಿರುವ ಹಾಗೂ ಕೊರೋನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಅವರನ್ನು ಶೀಘ್ರ ಕ್ವಾರೆಂಟೈನ್‍ಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರ್ಗಸೂಚಿ ಪ್ರಕಾರ ಜಮೀರ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸುವ ಅಗತ್ಯವಿದ್ದು, ಈ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದಿದ್ದಾರೆ. ಕೊರೋನಾ ವೈರಸ್ ನಿಯಂತ್ರಣ ವಿಚಾರದಲ್ಲಿ ಜಾತಿ-ಧರ್ಮ, ಬಡವ-ಶ್ರೀಮಂತ ಎಂಬ ಯಾವುದೇ ತಾರತಮ್ಯವಿಲ್ಲ. ಸೋಂಕು ನಿಯಂತ್ರಣವೇ ಎಲ್ಲರ ಗುರಿಯಾಗಬೇಕು. ಇಂತಹ ಸಂದರ್ಭದಲ್ಲಿ ಶಾಸಕ ಜಮೀರ್ ಅವರು ಪಾದರಾಯನಪುರದಲ್ಲಿ ಗಲಾಟೆ ಮಾಡಿದವರ ಪರವಾಗಿ ಮಾತನಾಡಿದ್ದು ಸರಿಯಲ್ಲ ಎಂದರು.
ನಿನ್ನೆಯಷ್ಟೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಪಾದರಾಯನಪುರದ ಘಟನೆಗೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ಅವರ ಪಾತ್ರ ಏನು ಎಂಬುದು ಕುರಿತು ತನಿಖೆ ನಡೆಸಲಾಗುವುದು. ಅಗತ್ಯವಿದ್ದಲ್ಲಿ ಜಮೀರ್ ಅವರನ್ನು ಕೂಡ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು ಎಂದು ಹೇಳಿರುವುದನ್ನು ಈ ಸಂದರ್ಭ ಸ್ಮರಿಸಬಹುದು.
0 comments:
Post a Comment