ಟಾಸ್ಕ್ ಫೋರ್ಸ್ ಸಮಿತಿಯ ಶಿಫಾರಸ್ಸಿಗೇ ಬೆಲೆ ಇಲ್ಲದಾಯಿತೇ?
ವಿಟ್ಲ (ಕರಾವಳಿ ಟೈಮ್ಸ್) : ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ಹೋಗಲು ವ್ಯವಸ್ಥೆ ಮಾಡುತ್ತೇವೆಂದು ಸರ್ಕಾರ ಹೇಳಿರುವುದು ಪ್ರಚಾರಕ್ಕಾಗಿಯೋ ಎಂಬ ಅನುಮಾನ ಮೂಡುವಂತಾಗಿದೆ. ಲಾಕ್‍ಡೌನ್‍ನಿಂದ ಪರವೂರಿನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಆಯಾಯ ಜಿಲ್ಲಾಡಳಿತದ ನೆರವಿನಿಂದ ತಮ್ಮ ಊರುಗಳಿಗೆ ಸರಕಾರಿ ಬಸ್ಸುಗಳಲ್ಲಿ ತಲುಪಿಸುತ್ತೇವೆಂದು ಸರ್ಕಾರ ಆಶ್ವಾಸನೆ ಕೊಟ್ಟಿತ್ತು. ಸರಕಾರದ ಮಾತು ನಂಬಿದ ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 19 ಜನ ಕಳೆದ 1 ತಿಂಗಳಿಂದ ಕೊಳ್ನಾಡು ಗ್ರಾಮದಲ್ಲಿದ್ದ ವಲಸೆ ಕಾರ್ಮಿಕರು ತಮ್ಮ ಗಂಟುಮೂಟೆ ಕಟ್ಟಿ ಶನಿವಾರ ಬೆಳಗ್ಗೆಯೇ ಬಸ್ಸಿಗಾಗಿ ಕಾದು ಕುಳಿತರು. ಕೊಳ್ನಾಡು ಗ್ರಾಮ ಟಾಸ್ಕ್‍ಪೋರ್ಸ್ ಕಾರ್ಮಿಕರ ವೈದ್ಯಕೀಯ ಷರೀಕ್ಷೆಯನ್ನೂ ಮಾಡಿಸಿತ್ತು. ಭಾನುವಾರ ಸಂಜೆಯಾದರೂ ಬಸ್ಸು ಮಾತ್ರ ಇತ್ತ ಕಡೆ ಸುಳಿದಿಲ್ಲ. ಒಂದು ತಿಂಗಳಿಂದ ಕೆಲವೊಂದು ದಾನಿಗಳ ಸಹಕಾರದೊಂದಿಗೆ ಪಂಚಾಯತ್ ಆಡಳಿತ ವಲಸೆ ಕಾರ್ಮಿಕರ ಹೊಟ್ಟೆ ತುಂಬಿಸಿದೆ.
ಪಂಚಾಯತ್ ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಕಾರ್ಮಿಕರನ್ನು ಊರಿಗೆ ಕಳುಹಿಸಲು ಈ ಬಗ್ಗೆ ಬಂಟ್ವಾಳ ತಹಶೀಲ್ದಾರರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕರೆ ಮಾಡಿ ಅವ್ಯವಸ್ಥೆಯ ಬಗ್ಗೆ ವಿವರಿಸಿದ್ದರೂ ಯಾವುದೇ ಪ್ರಯೋಜನ ಸಿಕ್ಕಿಲ್ಲ. ಭಾನುವಾರ ಮಧ್ಯಾಹ್ನ ಮತ್ತೆ ಕರೆ ಮಾಡಿದಾಗ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಲು ನಮ್ಮಲ್ಲಿ ಹಣದ ಕೊರತೆಯಿದೆ ಎಂಬ ಉತ್ತರ ತಹಶೀಲ್ದಾರರಿಂದ ಕೇಳಬೇಕಾಯಿತೆಂದು ಕೊಳ್ನಾಡು ಟಾಸ್ಕ್‍ಪೋರ್ಸ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತ ವಲಸೆ ಕಾರ್ಮಿಕರ ಗೋಳಾಟ ನೋಡಲಾಗದೇ ಭಾನುವಾರ ಸಂಜೆ ಮತ್ತೆ ಪಂಚಾಯತ್ ಅಧ್ಯಕ್ಷರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ತಾಲೂಕು ತಹಶೀಲ್ದಾರರಿಗೆ ಕರೆಮಾಡಿ ಪ್ರಯಾಣ ವೆಚ್ಚವನ್ನು ನಾವೆಲ್ಲ ಸೇರಿಕೊಂಡು ಭರಿಸುತ್ತೇವೆ. ಕಾರ್ಮಿಕರನ್ನು ಕಳುಹಿಸಲು ಕನಿಷ್ಠ ಅನುಮತಿಯನ್ನಾದರೂ ನೀಡುವಂತೆ ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಹಾಗೂ ಸಚಿವರ ಈ ನಡೆ ವಲಸೆ ಕಾರ್ಮಿಕರ ಬಗ್ಗೆ ಸರಕಾರದ ಕಾಳಜಿಯನ್ನು ಎತ್ತಿ ತೋರಿಸುತ್ತಿದೆ. ವಲಸೆ ಕಾರ್ಮಿಕರಿಗೆ ಉಂಟಾದ ಇದೇ ಪರಿಸ್ಥಿತಿ ಮಂತ್ರಿ-ಮಾಗಧರ ಅಥವಾ ಅಧಿಕಾರಿಗಳ ಕುಟುಂಬಕ್ಕೆ ಬಂದು ಅವರು ಏನಾದರೂ ಅತಂತ್ರ ಸ್ಥಿತಿಯಲ್ಲಿದ್ದರೆ ಕಾರ್ಮಿಕ ಗೋಳು ಅವರಿಗೆ ಅರ್ಥವಾಗುತ್ತಿತ್ತೇನೋ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಸ್ಪಂದನೆ ಇಲ್ಲದ ಮನೋಭಾವಕ್ಕೆ ನೊಂದು ಇಲ್ಲಿನ ವಲಸೆ ಕಾರ್ಮಿಕರು ಕಣ್ಣೀರಿಡುತ್ತಿದ್ದಾರೆ.
0 comments:
Post a Comment