ವಿಟ್ಲ (ಕರಾವಳಿ ಟೈಮ್ಸ್) : ವಿಟ್ಲ ಸಮೀಪದ ಕೊಡುಂಗೈ-ರಾಧುಕಟ್ಟೆ ನಿವಾಸಿ, ಅಡಿಕೆ ಉದ್ಯಮಿ ಹಾಜಿ ಅಹ್ಮದ್ ಕುಂಞÂ ಎಂಬವರ ಪುತ್ರ ಅಬ್ದುಲ್ ರಝಾಕ್ (42) ಶುಕ್ರವಾರ ಮಧ್ಯಾಹ್ನದ ಬಳಿಕ ಉಕ್ಕುಡ-ದರ್ಬೆಯ ಹೋನೆಸ್ಟ್ ಕಲ್ಲಿನ ಕೋರೆಗೆ ಬಟ್ಟೆ ಒಗೆಯಲೆಂದು ತೆರಳಿದವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾಧುಕಟ್ಟೆಯ ತನ್ನ ಮನೆಯ ಕೆಲಸ ನಡೆಯುತ್ತಿರುವುದರಿಂದ ಅಬ್ದುಲ್ ರಝಾಕ್ ತನ್ನ ಸಹೊದರಿಯ ಮನೆಯಾಗಿರುವ ಉಕ್ಕುಡ-ದರ್ಬೆಯ ಮನೆಯಲ್ಲಿ ಕಳೆದ ಕೆಲ ದಿನಗಳಿಂದ ವಾಸವಾಗಿದ್ದರು. ಶುಕ್ರವಾರ ಅಪರಾಹ್ನ ತನ್ನ ಸಹೋದರಿಯ ಪುತ್ರನೊಂದಿಗೆ ಇಲ್ಲಿನ ಕಲ್ಲಿನ ಕೋರೆಗೆ ಬಟ್ಟೆ ಒಗೆಯಲೆಂದು ತೆರಳಿದ ಇವರು ಚಾಪೆಯೊಂದು ನೀರಿನಲ್ಲಿ ಒಂದಷ್ಟು ಮಧ್ಯಭಾಗಕ್ಕೆ ಹೋಗಿರುವುದನ್ನು ಹಿಡಿಯಲು ಕೆರೆಯ ಮಧ್ಯಭಾಗಕ್ಕೆ ತೆರಳಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಅಲ್ಲೇ ಕಾಣೆಯಾಗಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭ ಸ್ಥಳದಲ್ಲಿದ್ದ ಸಹೋದರಿಯ ಪುತ್ರ ಮನೆಯಲ್ಲಿ ಬಂದು ವಿಷಯ ತಿಳಿಸಿದ ನಂತರ ಮನೆ ಮಂದಿಗೆ ಸಂಗತಿ ಗೊತ್ತಾಗಿದೆ. ಬಳಿಕ ಮನೆ ಮಂದಿ ಹಾಗೂ ಸ್ಥಳೀಯರು ಆಗಮಿಸಿ ಕೆರೆಯಲ್ಲಿ ಹುಡುಕಾಡಿದರೂ ಮೃತದೇಹ ಪತ್ತೆಯಾಗಲಿಲ್ಲ. ನಂತರ ಗೂಡಿನಬಳಿ ನಿವಾಸಿ ಈಜುಪಟು ಯುವಕರು ಕೆರೆಗಿಳಿದು ಹುಡುಕಾಡಿದ್ದು, ರಾತ್ರಿ ವೇಳೆಗೆ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ.
ಅಡಿಕೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಝಾಕ್ ಪತ್ನಿ, ಪುತ್ರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment