ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸರಕಾರ ಹಠಾತ್ ಆಗಿ ಲಾಕ್‍ಡೌನ್ ಘೋಷಿಸಿದ ಹಿನ್ನಲೆಯಲ್ಲಿ ನೆಂಟಸ್ತಿಕೆ ಕಟ್ಟಿ ಬಂದ ರಾಜ್ಯದ ಜನ ವಿವಿಧ ಜಿಲ್ಲೆಗಳ ತಮ್ಮ ಸಂಬಂಧಿಕರ ಮನೆಗಳಲ್ಲಿ, ಫ್ಲ್ಯಾಟ್‍ಗಳಲ್ಲಿ ಬಾಕಿಯಾಗಿ ತಿಂಗಳೇ ಬಾಕಿಯಾಗಿದೆ. ಅದೇ ರೀತಿ ವಿವಿಧ ಜಿಲ್ಲೆಗಳಿಂದ ಶೈಕ್ಷಣಿಕ ಉದ್ದೇಶಗಳಿಗಾಗಿ ಬಂದು ಹಾಸ್ಟೆಲ್, ಫ್ಲ್ಯಾಟ್ ಹಾಗೂ ಸಂಬಂಧಿಕರ ಮನೆಗಳಲ್ಲಿ ಬಾಕಿಯಾಗಿರುತ್ತಾರೆ. ಇವರೆಲ್ಲರೂ ಲಾಕ್‍ಡೌನ್‍ನಿಂದಾಗಿ ಇನ್ನೂ ತವರು ಸೇರಲು ಸಾಧ್ಯವಾಗದೆ ಇದ್ದಲ್ಲೇ ಬಾಕಿಯಾಗಿದ್ದು, ಒಂದು ರೀತಿಯ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಇನ್ನೇನು ಎಪ್ರಿಲ್ 14ಕ್ಕೆ ಲಾಕ್‍ಡೌನ್ ಮುಗಿಯಲಿದೆ ಎಂದುಕೊಂಡು ಇದ್ದಲ್ಲಿಯೇ ಸೇಫ್ ಆಗಿ ಇದ್ದುಕೊಂಡು ಕಾಯುತ್ತಿದ್ದವರು ಎಪ್ರಿಲ್ 14 ರ ಬಳಿಕ ಮೇ 3ರವರಗೆ ಲಾಕ್‍ಡೌನ್ ವಿಸ್ತರಣೆಯಾದ ಪರಿಣಾಮ ಮತ್ತೆ ಸಮಸ್ಯೆಯ ಸುಳಿಗೆ ಸಿಲುಕಿ ಒದ್ದಾಟದ ದಿನಗಳನ್ನು ಕಳೆಯುವಂತಾಗಿದೆ.
ಇನ್ನು ಮೇ 3ಕ್ಕೆ ಲಾಕ್‍ಡೌನ್ ಮುಗಿಯುವ ಬಗ್ಗೆಯೂ ಭರವಸೆ ಉಳಿಯದೆ ಮತ್ತೆ ಮೇ ಅಂತ್ಯದವರೆಗೂ ಲಾಕ್‍ಡೌನ್ ಮುಂದುವರಿಯುವ ಬಗ್ಗೆ ಮಾಹಿತಿಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಈ ರೀತಿ ಮನೆ ಬಿಟ್ಟು ಎಲ್ಲೆಲ್ಲೋ ಬಾಕಿಯಾದ ಕುಟುಂಬಗಳು ಹಾಗೂ ವಿದ್ಯಾರ್ಥಿಗಳು ತೀವ್ರ ಆತಂಕ ಹಾಗೂ ಗೊಂದಲದಿಂದಲೇ ದಿನಗಳೆಯುತ್ತಿದ್ದಾರೆ. ಪಿಯುಸಿ ವಿದ್ಯಾರ್ಥಿಗಳು ಒಂದೇ ಒಂದು ಪರೀಕ್ಷೆಗಾಗಿ ಬಾಕಿಯಾದರೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಭವಿಷ್ಯದ ಪರೀಕ್ಷೆ ಮುಗಿಸಿ ತವರಿಗೆ ಹೊರಡುವ ಸಿದ್ದತೆಯಲ್ಲಿದ್ದರು. ಆದರೆ ಅತ್ತ ಪರೀಕ್ಷೆಯೂ ಇಲ್ಲದೆ, ಇತ್ತ ಮನೆಗೂ ಸೇರಲಾಗದೆ ಪರಿತಪಿಸುತ್ತಿದ್ದು, ಯಾವಾಗ ಬಂಧನದಿಂದ ಮುಕ್ತಿ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಸರಕಾರ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಿ ಈಗಾಗಲೇ ನಿನ್ನೆಯಿಂದ ವಲಸೆ ಕಾರ್ಮಿಕರು ತವರು ಸೇರಲು ಸರಕಾರಿ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಅವರವರ ಮನೆ ತಲುಪಿಸಲು ಕ್ರಮ ಕೈಗೊಂಡ ಮಾದರಿಯಲ್ಲೇ ಲಾಕ್‍ಡೌನ್ ಪರಿಣಾಮ ನೆಂಟಸ್ಥರ ಮನೆಯಲ್ಲಿ, ಫ್ಲ್ಯಾಟ್‍ಗಳಲ್ಲಿ ಹಾಗೂ ಹಾಸ್ಟೆಲ್‍ಗಳಲ್ಲಿ ಬಾಕಿಯಾದ ಕುಟುಂಬಗಳು ಹಾಗೂ ವಿದ್ಯಾರ್ಥಿಗಳು ತಮ್ಮ ತವರು ಸೇರಲು ಅನುಕೂಲವಾಗುವಂತೆ ಸರಕಾರ ಕನಿಷ್ಠ ಒಂದು ದಿನದ ಮಟ್ಟಿಗಾದರೂ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.
0 comments:
Post a Comment