ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನ
ಮಂಗಳೂರು (ಕರಾವಳಿ ಟೈಮ್ಸ್) : ಜಗತ್ತಿನಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಹಿನ್ನಲೆಯಲ್ಲಿ ಎಲ್ಲೆಡೆಯೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ ಮಂಗಳೂರು ತಾಲೂಕಿನ ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕೆ ಸಿ ರೋಡು ಸಮೀಪದ ಕೆ ಸಿ ನಗರ ಎಂಬಲ್ಲಿ ರಸ್ತೆ ಬದಿಯಲ್ಲೇ ಕಿಲೋ ಮೀಟರ್‍ಗಟ್ಟಲೆ ಉದ್ದಕ್ಕೂ ತ್ಯಾಜ್ಯಗಳನ್ನು ಎಸೆದಿರುವ ದೃಶ್ಯ ಕಂಡು ಬರುತ್ತಿದ್ದು, ತ್ಯಾಜ್ಯದ ರಾಶಿಯೇ ರಸ್ತೆಯನ್ನೆಲ್ಲಾ ನುಂಗಿ ಹಾಕುವ ಹಂತಕ್ಕೆ ಬಂದಿದೆ. ರಸ್ತೆ ಬದಿಯಲ್ಲೇ ಇರುವ ಈ ತ್ಯಾಜ್ಯ ವಸ್ತುಗಳನ್ನು ನರಿ-ನಾಯಿಗಳು, ದನ-ಜಾನುವಾರುಗಳು ನಿತ್ಯವೂ ಎಲ್ಲೆಂದರಲ್ಲಿ ಎಳೆದಾಡುತ್ತಿದೆ. ಇದರಿಂದಾಗಿ ಪರಿಸರದಾದ್ಯಂತ ದುರ್ನಾತ ಬೀರುತ್ತಿದ್ದು, ಇಲ್ಲಿನ ಜನ ಹಾಗೂ ವಾಹನ ಸವಾರರು ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ. ಇಲ್ಲಿನ ತ್ಯಾಜ್ಯ ಸಮಸ್ಯೆ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯತ್ ಅಧಿಕಾರಿಗಳ ಹಾಗೂ ಆಡಳಿತದ ಗಮನಕ್ಕೆ ಸ್ಥಳೀಯರು ಸಾಕಷ್ಟು ಬಾರಿ ತಂದಿದ್ದರೂ ಯಾವುದೇ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೀಗ ವಿಶ್ವವೇ ಸಾಂಕ್ರಾಮಿಕ ರೋಗದ ಭೀತಿಯಲ್ಲಿರುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲೇ ಇಂತಹ ತ್ಯಾಜ್ಯ ರಾಶಿ ಇರುವ ಬಗ್ಗೆ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ತಕ್ಷಣ ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment