ಅತಂತ್ರ ಸ್ಥಿತಿಯಲ್ಲಿ ಜಿಲ್ಲಾಡಳಿತ
ಆತಂಕದಲ್ಲಿ ಜನತೆ
ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಸೋಂಕಿನಿಂದ ಗುರುವಾರ ಮೃತಪಟ್ಟ ಬಂಟ್ವಾಳದ 75 ವರ್ಷದ ಮಹಿಳೆಯ ಶವ ಸಂಸ್ಕಾರಕ್ಕೆ ಜಿಲ್ಲೆಯ ವಿವಿಧ ಭಾಗದ ಜನ ಹಾಗೂ ಆಯಾ ಕ್ಷೇತ್ರದ ಶಾಸಕರು ವಿರೋಧ ವ್ಯಕ್ತಪಡಿಸಿದ ಕಾರಣ ಜಿಲ್ಲಾಡಳಿತ ಅತಂತ್ರ ಸ್ಥಿತಿಗೆ ಬಂದಿದ್ದು, ಶವ ಸಂಸ್ಕಾರಕ್ಕಾಗಿ ತಿರುಗಾಟ ನಡೆಸುವಂತಾಗಿದೆ.
ಆರಂಭದಲ್ಲಿ ಜಿಲ್ಲಾಡಳಿತ ಶವ ಸಂಸ್ಕಾರಕ್ಕಾಗಿ ಪಚ್ಚನಾಡಿ ರುದ್ರಭೂಮಿ ಆಯ್ಕೆ ಮಾಡಿಕೊಂಡಿದ್ದು ಇದಕ್ಕೆ ಇಲ್ಲಿನ ಜನ ಹಾಗೂ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅಲ್ಲಿಂದ ಮೂಡುಶೆಡ್ಡೆಗೆ ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿತು. ಇಲ್ಲಿಯೂ ಜನ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಬಳಿಕ ರಾತ್ರಿ ವೇಳೆಗೆ ಬಂಟ್ವಾಳ-ಬಡ್ಡಕಟ್ಟೆ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕಾಗಿ ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುವಷ್ಟರಲ್ಲಿ ಅಲ್ಲಿಯೂ ಸ್ಥಳೀಯರು ಜಮಾಯಿಸಿದ್ದು ಶವ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಆ ಬಳಿಕ ಬಿ ಸಿ ರೋಡು-ಗೂಡಿನಬಳಿ ರೈಲ್ವೇ ನಿಲ್ದಾಣದ ಬಳಿ ಇರುವ ರುದ್ರ ಭೂಮಿಯ ಪರಿಶೀಲನೆಗೆ ಅಧಿಕಾರಿಗಳು ತಡ ರಾತ್ರಿ ವೇಳೆ ಬಂದಿದ್ದು, ಸುದ್ದಿ ತಿಳಿದ ಸ್ಥಳೀಯರು ಅಲ್ಲಿಯೂ ಜಮಾಯಿಸಿ ತೀವ್ರ ವ್ಯಕ್ತಪಡಿಸಿದ್ದಾರೆ. ಆದರೆ ಬಂಟ್ವಾಳದಲ್ಲಿ ಶವ ಸಂಸ್ಕಾರ ನಡೆಸುವ ಸಿದ್ದತೆ ಬಗ್ಗೆ ಇಲ್ಲಿನ ಶಾಸಕರ ನಿಲುವಿನ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಸ್ಥಳೀಯರು ಶಾಸಕರನ್ನು ಸಂಪರ್ಕಿಸಿ ವಿರೋಧ ವ್ಯಕ್ತಪಡಿಸುವ ಪ್ರಯತ್ನ ನಡೆಸಿದ್ದಾರೆ.
ಜಿಲ್ಲೆಯ ಜನ ವಿರೋಧ ಹಾಗೂ ಆತಂಕ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಶವ ಸಂಸ್ಕಾರಕ್ಕಾಗಿ ಅಲೆದಾಟ ನಡೆಸುವ ಸನ್ನಿವೇಶ ನಿರ್ಮಾಣವಾಗಿದೆ ಎನ್ನಲಾಗಿದೆ.
0 comments:
Post a Comment