ಬಂಟ್ವಾಳ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಘೋಷಣೆಯಾದ ಬಳಿಕ ತಾಲೂಕಿನ ಬಹುತೇಕ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‍ಗಳು, ಲ್ಯಾಬೋರೇಟರಿಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್‍ಗಳು ಬಹುತೇಕ ಬಂದ್ ಆಗಿದ್ದು, ಇನ್ನು ಕೆಲವು ಚಿಕಿತ್ಸೆಗೆ ನಿರಾಕರಿಸುತ್ತಿವೆ. ಖಾಸಗಿ ವೈದ್ಯರು ಆಸ್ಪತ್ರೆಗೆ, ಕ್ಲಿನಿಕ್‍ಗಳಿಗೆ ಬಾರದೇ ಮನೆಯಲ್ಲೇ ಇದ್ದಾರೆ. ಇದರಿಂದ ಸಾರ್ವಜನಿಕರು ಸರಕಾರಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳನ್ನೇ ಆಶ್ರಯಸುವಂತಾಗಿದೆ. ಇದು ಸಹಜವಾಗಿಯೇ ಜನಸಂದಣಿಗೆ ಕಾರಣವಾಗುತ್ತಿದೆ ಎಂದು ಗುರುವಾರ ಸಜಿಪಮುನ್ನೂರು ಗ್ರಾಮ ಪಂಚಾಯತಿಯಲ್ಲಿ ನಡೆದ ಪಂಚಾಯತ್ ಮಟ್ಟದ ಟಾಸ್ಕ್‍ಫೋರ್ಸ್ ಸಭೆಯಲ್ಲಿ ಗ್ರಾಮಸ್ಥರು ಟಾಸ್ಕ್‍ಫೋರ್ಸ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಪರವಾಗಿ ಪಂಚಾಯತ್ ಸದಸ್ಯ ಯೂಸುಫ್ ಕರಂದಾಡಿ ವಿಷಯ ಪ್ರಸ್ತಾಪಿಸಿದಾಗ ಸಭೆಯಲ್ಲಿದ್ದ ಎಲ್ಲ ಗ್ರಾಮಸ್ಥರು ಧ್ವನಿಗೂಡಿಸಿದರು. ಸರಕಾರವನ್ನು ಪ್ರತಿನಿಧಿಸುವ ಮಂತ್ರಿಗಳು ಪದೇ ಪದೇ ಬಂದ್ ಮಾಡುವ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುವುದು, ಪರವಾನಿಗೆ ರದ್ದುಪಡಿಸಲಾಗುವುದು ಎಂಬಿತ್ಯಾದಿ ಹೇಳಿಕೆಗಳು ನೀಡುತ್ತಿದ್ದಾರಾದರೂ ತಾಲೂಕು ಮಟ್ಟದಲ್ಲಿ ಇರುವ ಇಂತಹ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತವಾಗಲೀ, ಜಿಲ್ಲಾ ಮಂತ್ರಿಗಳಾಗಲೀ, ಸ್ಥಳೀಯ ಶಾಸಕರಾಗಲೀ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
108 ಅಥವಾ ಇತರ ಅಂಬ್ಯುಲೆನ್ಸ್‍ಗಳಲ್ಲಿ ಗರ್ಭಿಣಿ ಮಹಿಳೆಯರು ಅಥವಾ ಇನ್ನಿತರ ರೋಗಿಗಳು ತೆರಳುವ ಸಂದರ್ಭ ಚೆಕ್‍ಪೋಸ್ಟ್‍ಗಳಲ್ಲಿ ನಿಲ್ಲಿಸುವ ಪೊಲೀಸರು ಅಥವಾ ಅಧಿಕಾರಿಗಳು ಅಂಬ್ಯುಲೆನ್ಸ್ ವಾಹನದಲ್ಲಿರುವುದು ರೋಗಿಗಳು ಎಂಬುದನ್ನು ಅರ್ಥ ಮಾಡಿಕೊಂಡರೂ ಅಂತಹ ವಾಹನಗಳನ್ನು ತಕ್ಷಣ ತೆರಳಲು ಅವಕಾಶ ಮಾಡಿಕೊಡದೆ ಹಲವು ನಿಮಿಷಗಳ ಕಾಲ ವಿಚಾರಣೆ ನಡೆಸುತ್ತಿರುವು ಬಹಳಷ್ಟು ಪ್ರಕರಣಗಳು ನಡೆಯುತ್ತಿದ್ದು, ಇಂತಹ ಸಂದರ್ಭಗಳಲ್ಲಿ ರೋಗಿ ನರಕಯಾತನೆ ಅನುಭವಿಸುತ್ತಿರುವ ಘಟನೆಗಳೂ ನಡೆಯುತ್ತಿದೆ. ಇದು ಒಟ್ಟಾರೆ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ಆಗಬೇಕಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹಿಸಿದರು. ಖಾಸಗಿ ಲ್ಯಾಬೋರೇಟರಿಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್‍ಗಳು ಬಂದ್ ಆಗಿರುವುದರಿಂದ ಗರ್ಭಿಣಿ ಮಹಿಳೆಯರ ಸಹಿತ ವಿವಿಧ ರೋಗಿಗಳು ರೋಗಕ್ಕೆ ಸಂಬಂಧಪಟ್ಟ ವರದಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದೆ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಕೆಲವೊಮ್ಮೆ ಜೀವಕ್ಕೂ ಅಪಾಯದ ಹಂತಕ್ಕೂ ತಲುಪುತ್ತಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡರು.
ಗ್ರಾಮಸ್ಥರ ಆಗ್ರಹವನ್ನು ಆಲಿಸಿದ ಟಾಸ್ಕ್‍ಫೋರ್ಸ್ ಸಮಿತಿಯ ನೇತೃತ್ವ ವಹಿಸಿದ್ದ ಸಜಿಪಮುನ್ನೂರು ಆರೋಗ್ಯ ಕೇಂದ್ರದ ಸುಮನಾ ಅವರು ಈ ಎಲ್ಲಾ ಬೇಡಿಕೆಗಳನ್ನು ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
0 comments:
Post a Comment