ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಸೋಂಕಿನ ತಡೆಗೆ ರಾಜ್ಯದಲ್ಲಿ ಲಾಕ್‍ಡೌನ್ ಆಗಿರುವುದರಿಂದ ಕೂಲಿ ಕಾರ್ಮಿಕರು ಸೇರಿದಂತೆ ಬಡವರಿಗೆ ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗಿರುವ ಹಿನ್ನಲೆಯಲ್ಲಿ ಜನ ಹಸಿವಿನಿಂದ ಪರಿತಪಿಸಬಾರದು ಎಂದು ಪಡಿತರ ಚೀಟಿ ಇಲ್ಲದವರಿಗೂ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಡಿತರ ಚೀಟಿ ಇಲ್ಲದಿರುವ ಬಡವರು ಕೂಡ ಸಂಬಂಧಪಟ್ಟ ಇಲಾಖೆಗಳಲ್ಲಿ ಹೋಗಿ ನಾಳೆಯಿಂದ ಆಹಾರ ಧಾನ್ಯಗಳನ್ನು ಪಡೆಯಬಹುದು. ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಹಾಪ್ ಕಾಮ್ಸ್ ಮೂಲಕ ನಗರ ಪ್ರದೇಶಗಳಲ್ಲಿ ತರಕಾರಿ ಒದಗಿಸಲಾಗುತ್ತಿದೆ. ಜನರು ಮನೆಯಿಂದ ಹೊರಬಂದು ಲಾಕ್‍ಡೌನ್ ನಿಯಮ ಉಲ್ಲಂಘಿಸಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡರು.
ಕೊರೋನಾ ನಿಯಂತ್ರಣ ಸಂಬಂಧ ಸಿಎಂ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಬೆಂಗಳೂರು ಶಾಸಕರು, ಸಚಿವರು, ಸಂಸದರ, ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.
ಬೆಂಗಳೂರಿನಲ್ಲಿ ಪರಿಸ್ಥಿತಿ ಹೇಗಿದೆ, ಏನೆಲ್ಲಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು.
ಸಚಿವ ವಿ ಸೋಮಣ್ಣ, ಆರ್ ಅಶೋಕ್ ಸಂಸದರಾದ ಪಿಸಿ ಮೋಹನ್, ತೇಜಸ್ವಿಸೂರ್ಯ, ಡಿಕೆ ಸುರೇಶ್, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮೇಯರ್ ಗೌತಮ್ ಕುಮಾರ್, ಮಾಜಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಾಲಿಕೆ ಸದಸ್ಯರು, ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
0 comments:
Post a Comment