ಬೆಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಸೋಂಕಿನ ಸಂದರ್ಭದಲ್ಲಿ ಯಾರು ಕೂಡ ಹಸಿದಿರಬಾರದು ಎಂಬ ಉದ್ದೇಶದಿಂದ ಸರ್ಕಾರ ಎರಡು ತಿಂಗಳ ಪಡಿತರವನ್ನು ನೀಡಿ ಅದನ್ನು ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದ್ದರೂ ಪಡಿತರ ವಿತರಣೆಯಲ್ಲಿ ನಿರ್ಲಕ್ಷ್ಯ ತೋರಿದ, ಹಣಕ್ಕಾಗಿ ಬೇಡಿಕೆ ಇಟ್ಟ ಕಾರಣದಿಂದ ರಾಜ್ಯದ ವಿವಿಧ ಜಿಲ್ಲೆಗಳ 7ಕ್ಕೂ ಅಧಿಕ ಪಡಿತರ ಅಂಗಡಿಗಳನ್ನು ಅಮಾನತುಗೊಳಿಸಲಾಗಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ. ಗೋಪಾಲಯ್ಯ ಅವರು ಬೆಂಗಳೂರಿನ ಹಲವು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳು ಪರಿಶೀಲನೆಗೆ ಆಗಮಿಸಿದಾಗ ಸರಿಯಾಗಿ ಉತ್ತರಿದದೆ, ಪಡಿತರ ವಿತರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಅಧಿಕಾರಿಗಳ ಪರಿಶೀಲನೆಗೆ ಅಡ್ಡಿ ಪಡಿಸಿದ ಆರೋಪದಲ್ಲಿ ಬೆಂಗಳೂರು ಉತ್ತರ ತಾಲೂಕು ನ್ಯಾಯಬೆಲೆ ಅಂಗಡಿ ಸಂಖ್ಯೆ 15, ಎನ್. ಕಾರ್ತಿಕ್ ಚನ್ನನಾಯಕನಹಳ್ಳಿ ಅವರನ್ನು ಅಮಾನತುಪಡಿಸಲಾಗಿದೆ.
ಈ ನ್ಯಾಯಬೆಲೆ ಅಂಗಡಿಯ ಪಡಿತರ ಚೀಟಿದಾರರಿಗೆ ಚಿಕ್ಕಬಿದರಕಲ್ಲು ಜ್ಞಾನಜ್ಯೋತಿ ಮಹಿಳಾ ಸಂಘದ 243ನೇ ನ್ಯಾಯಬೆಲೆ ಅಂಗಡಿಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೊಡ್ಡ ಕೋಗಿಲು ನ್ಯಾಯಬೆಲೆ ಅಂಗಡಿಯನ್ನು ಸಹ ಅಮಾನತು ಮಾಡಲಾಗಿದೆ.
0 comments:
Post a Comment