ರಾಜ್ಯದಲ್ಲಿ ಇನ್ನೆರಡು ದಿನ ಮುಂಗಾರು ಪೂರ್ವ ಮಳೆಯ ಮುನ್ಸೂಚನೆ - Karavali Times ರಾಜ್ಯದಲ್ಲಿ ಇನ್ನೆರಡು ದಿನ ಮುಂಗಾರು ಪೂರ್ವ ಮಳೆಯ ಮುನ್ಸೂಚನೆ - Karavali Times

728x90

7 April 2020

ರಾಜ್ಯದಲ್ಲಿ ಇನ್ನೆರಡು ದಿನ ಮುಂಗಾರು ಪೂರ್ವ ಮಳೆಯ ಮುನ್ಸೂಚನೆ



ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯದ ಒಳನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಮುಂಗಾರು ಪೂರ್ವ ಮಳೆ ಇನ್ನು ಎರಡು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಗಳಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಿದೆ. ಮತ್ತೆ ಕೆಲವಡೆ ಆಲಿಕಲ್ಲು, ಬಿರುಗಾಳಿ, ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಮಳೆಯಾದ ವರದಿಯಾಗಿದೆ.

ಮಾವು ಸೇರಿದಂತೆ ಕೊಯ್ಲಿಗೆ ಬಂದಿದ್ದ ಬೆಳೆಗಳಿಗೆ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.

ಕೇರಳದಿಂದ ಮಧ್ಯ ಮಹಾರಾಷ್ಟ್ರದವರೆಗೂ ಇನ್ನೂ ಎರಡು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ನಿನ್ನೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಒಳ್ಳೆಯ ಮಳೆಯಾಗಿದೆ. ಇನ್ನೂ ಎರಡು ದಿನ ಚದುರಿದಂತೆ ಕೆಲವು ಕಡೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯಗಳಿವೆ ಎಂದರು.
ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದ ಕೆಲವು ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಗುಡುಗಿನಿಂದ ಕೂಡಿದ ಮಳೆಯಾಗುವ ಲಕ್ಷಣಗಳಿವೆ. ಮುಂಗಾರು ಪೂರ್ವ ಮಳೆ ಎಪ್ರಿಲ್-ಮೇನಲ್ಲಿ ಬರುವುದು ವಾಡಿಕೆ. ಅದರಂತೆ ಈ ಬಾರಿಯೂ ಸಾಧಾರಣ ಪ್ರಮಾಣದ ಮಳೆಯಾಗುವ ಸಂಭವವಿದೆ ಎಂದು ಹೇಳಿದರು.

ವಾಡಿಕೆ ಮುಂಗಾರು ನಿರೀಕ್ಷೆ


ಈ ಬಾರಿಯ ಮುಂಗಾರಿನಲ್ಲಿ ವಾಡಿಕೆ ಪ್ರಮಾಣದ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಇನ್ನೂ ಮುಂಗಾರಿನ ದೀರ್ಘಾವಧಿ ಮಳೆ ಮುನ್ಸೂಚನೆ ನೀಡಿಲ್ಲ. ಆದರೆ, ಖಾಸಗಿ ಸಂಸ್ಥೆಯೊಂದು ಮುನ್ಸೂಚನೆ ವರದಿ ನೀಡಿದೆ. ಅದರ ಪ್ರಕಾರ ದೇಶದಲ್ಲಿ ವಾಡಿಕೆ ಮಳೆಯಾಗುವ ಮುನ್ಸೂಚನೆಗಳಿವೆ. ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಹೆಚ್ಚು ಮಳೆಯಾಗುವುದಾಗಿ ವರದಿ ಹೇಳಿದೆ ಎಂದು ತಿಳಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯದಲ್ಲಿ ಇನ್ನೆರಡು ದಿನ ಮುಂಗಾರು ಪೂರ್ವ ಮಳೆಯ ಮುನ್ಸೂಚನೆ Rating: 5 Reviewed By: karavali Times
Scroll to Top