ನವದೆಹಲಿ (ಕರಾವಳಿ ಟೈಮ್ಸ್) : ರಾಷ್ಟ್ರವ್ಯಾಪಿ ಲಾಕ್‍ಡೌನ್ ಮುಂದುವರಿಸಿ ಪ್ರಧಾನಿ ಮೋದಿ ಘೋಷಿಸಿದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಮಂಗಳವಾರ ತನ್ನ ಎಲ್ಲಾ ಸೇವೆಗಳನ್ನು ಮೇ 3 ರವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ.
ಪ್ರೀಮಿಯಂ ರೈಲುಗಳು, ಮೇಲ್/ ಎಕ್ಸ್‍ಪ್ರೆಸ್ ರೈಲುಗಳು, ಪ್ರಯಾಣಿಕರ ರೈಲುಗಳು, ಉಪನಗರ ರೈಲುಗಳು, ಕೋಲ್ಕತಾ ಮೆಟ್ರೋ ರೈಲು, ಕೊಂಕಣ ರೈಲ್ವೆ ಇತ್ಯಾದಿಗಳು ಸೇರಿದಂತೆ ಭಾರತೀಯ ರೈಲ್ವೆಯ ಎಲ್ಲಾ ಪ್ರಯಾಣಿಕ ರೈಲು ಸೇವೆಗಳನ್ನು 2020 ರ ಮೇ 3ರ ರಾತ್ರಿ 12 ಗಂಟೆಗಳವರೆಗೆ ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ದೇಶದ ವಿವಿಧ ಭಾಗಗಳಲ್ಲಿ ಅಗತ್ಯ ಸಾಮಗ್ರಿಗಳ ಸಾಗಣೆಗಾಗಿ, ಸರಕು ರೈಲುಗಳು ಮತ್ತು ಪಾರ್ಸೆಲ್ ರೈಲುಗಳ ಸೇವೆ ಮುಂದುವರಿಯುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರೈಲ್ವೆ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣದ ಆವರಣದ ಹೊರಗಿನ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಪ್ರಯಾಣಕ್ಕಾಗಿ ರೈಲು ಪ್ರಯಾಣ ಟಿಕೆಟ್ ಕಾಯ್ದಿರಿಸುವ ಎಲ್ಲಾ ಕೌಂಟರ್‍ಗಳು ಮೇ 3 ರವರೆಗೆ ಮುಚ್ಚಲ್ಪಡುತ್ತವೆ.
ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದಂತೆ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳನ್ನು 3 ಮೇ 2020 ರ ರಾತ್ರಿ 11: 59 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಡಿಜಿಸಿಎ ಟ್ವೀಟ್ ಮೂಲಕ ತಿಳಿಸಿದೆ.
ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯ ವಿರುದ್ಧ ಹೋರಾಡಲು ದೇಶಾದ್ಯಂತ ಲಾಕ್‍ಡೌನ್‍ಮೇ 3 ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
0 comments:
Post a Comment