ಬಂಟ್ವಾಳ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಆರಂಭದಿಂದಲೂ ವಲಸೆ ಕಾರ್ಮಿಕರ ಹಿತ ಕಾಪಾಡಿ ಎಂಬ ಬಗ್ಗೆ ನಾನು ಸರಕಾರಕ್ಕೆ ಆಗ್ರಹಿಸುತ್ತಲೇ ಬಂದಿದ್ದು, ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲೂ ಗಂಜಿ ಕೇಂದ್ರದಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾರ್ಮಿಕರ ಹಿತಕ್ಕಾಗಿ ಧ್ವನಿ ಎತ್ತುತ್ತಲೇ ಬಂದಿದ್ದೇನೆ. ಇದೀಗ ಕೊನೆಗೂ ಎಚ್ಚೆತ್ತ ಸರಕಾರ ಸರಕಾರಿ ಬಸ್ಸಿಗೆ ಚಾಲನೆ ನೀಡಿ ಕೆಲ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಿದೆ. ಆದರೆ ಇದು ಇನ್ನೂ ಪೂರ್ಣಗೊಂಡಿಲ್ಲ. ವಲಸೆ ಕಾರ್ಮಿಕರ ಸಂಪೂರ್ಣ ಹಿತದ ಬಗ್ಗೆ ಸರಕಾರ ಇನ್ನೂ ಖಚಿತಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆಗ್ರಹಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ತವರಿಗೆ ಈಗಾಗಲೇ ಕಳುಹಿಸಿದ ವಲಸೆ ಕಾರ್ಮಿಕರ ಬಗ್ಗೆ ಪ್ರಚಾರ ಗಿಟ್ಟಿಸಿಕೊಳ್ಳುವ ಬದಲಾಗಿ ಇನ್ನೂ ಅಲ್ಲಲ್ಲಿ ಬಾಕಿಯಾಗಿ ಸಂಕಷ್ಟಕ್ಕೊಳಗಾಗಿರುವ ವಲಸೆ ಕಾರ್ಮಿಕರ ಸಂಪೂರ್ಣ ಹಿತದ ಬಗ್ಗೆ ಸಂಬಂಧಪಟ್ಟವರು ಖಚಿತಪಡಿಸಕೊಳ್ಳಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ಹೊರ ಊರು, ಹೊರ ಜಿಲ್ಲೆಗಳಿಂದ ನಮ್ಮ ಜಿಲ್ಲೆಗೆ ಬಂದು ವಿದ್ಯಾಭ್ಯಾಸ ಮಾಡುತ್ತಿರುವ ಅದೆಷ್ಟೋ ವಿದ್ಯಾರ್ಥಿಗಳು ಅತ್ತ ಪರೀಕ್ಷೆಯೂ ಇಲ್ಲದೆ ಇತ್ತ ತವರಿಗೂ ಸೇರದೆ ಪರಿತಪಿಸುತ್ತಿದ್ದಾರೆ. ಇಂತಹ ವಿದ್ಯಾರ್ಥಿ ಸಮೂಹದ ಸಂಕಷ್ಟಕ್ಕೆ ಸರಕಾರ ತಕ್ಷಣ ಸ್ಪಂದಿಸುವ ಮೂಲಕ ವಿದ್ಯಾರ್ಥಿಗಳು ತವರು ಸೇರಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ರೈ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಅಲ್ಲದೆ ನೆಂಟಸ್ತಿಕೆ ಕಟ್ಟಿ ಬಂದವರು ಹಾಗೂ ಕೆಲವೊಂದು ಪವಿತ್ರ ಯಾತ್ರಾ ಸ್ಥಳಕ್ಕೆ ಬಂದು ಬಾಕಿಯಾದವರು ಲಾಕ್‍ಡೌನ್ ಹೇರಲ್ಪಟ್ಟ ಬಳಿಕ ಸಂಕಷ್ಟ ಅನುಭವಿಸುತ್ತಿದ್ದು, ಅಂತಹವರೆಲ್ಲರನ್ನು ಸೂಕ್ತ ತಪಾಸಣೆಗೊಳಪಡಿಸಿ ತವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಸರಕಾರ ಮಾಡಬೇಕು. ಒಂದು ವೇಳೆ ಸರಕಾರದಿಂದಲೇ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೂ ಕನಿಷ್ಠ ಅವರವರೇ ಖಾಸಗಿ ವಾಹನ ಗೊತ್ತುಪಡಿಸಿ ತವರಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ರಮಾನಾಥ ರೈ ಆಗ್ರಹಿಸಿದ್ದಾರೆ.
0 comments:
Post a Comment