ಲಾಕ್‍ಡೌನ್ ಸಂದರ್ಭ ಸಾರ್ವಜನಿಕರಿಗೆ ಅಂಚೆ ಇಲಾಖೆಯಲ್ಲಿ ಅಗತ್ಯ ಸೇವೆಗಳು ಲಭ್ಯ - Karavali Times ಲಾಕ್‍ಡೌನ್ ಸಂದರ್ಭ ಸಾರ್ವಜನಿಕರಿಗೆ ಅಂಚೆ ಇಲಾಖೆಯಲ್ಲಿ ಅಗತ್ಯ ಸೇವೆಗಳು ಲಭ್ಯ - Karavali Times

728x90

15 April 2020

ಲಾಕ್‍ಡೌನ್ ಸಂದರ್ಭ ಸಾರ್ವಜನಿಕರಿಗೆ ಅಂಚೆ ಇಲಾಖೆಯಲ್ಲಿ ಅಗತ್ಯ ಸೇವೆಗಳು ಲಭ್ಯ



ಮಂಗಳೂರು (ಕರಾವಳಿ ಟೈಮ್ಸ್) : ಕರೋನಾ ವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‍ಡೌನ್ ಅವಧಿಯಲ್ಲಿ ಅಂಚೆ ಇಲಾಖೆಯು ಅಗತ್ಯ ಸೇವೆಗಳನ್ನು ನೀಡುತ್ತಿದೆ. ಮಂಗಳೂರು ವಿಭಾಗದಲ್ಲಿ ಎಲ್ಲಾ ಇಲಾಖಾ ಮತ್ತು ಶಾಖಾ  ಅಂಚೆ ಕಛೇರಿಗಳು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಾರಂಭಿಸಿವೆ.

ಔಷಧ ಇತ್ಯಾದಿ ತುರ್ತು ಅಗತ್ಯದ ಸೇವೆಗಳು 


ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಊರಿನಿಂದ ಯಾವುದೇ ಊರಿಗೆ ಅಂಚೆ ಮೂಲಕ ಔಷಧ ಮತ್ತು ತುರ್ತು ಅಗತ್ಯದ ವಸ್ತುಗಳನ್ನು ರವಾನಿಸಬಹುದಾಗಿದೆ. ಸಮೀಪದ ಜಿಲ್ಲೆಗಳಾದ ಶಿವಮೊಗ್ಗ, ಮೈಸೂರು, ಕೊಡಗು ಹಾಗೂ ಚಿಕ್ಕಮಗಳೂರು ಇತ್ಯಾದಿ ಊರುಗಳಿಗೆ ಕೂಡ ಔಷಧ ಮತ್ತು ಅಗತ್ಯ ವಸ್ತುಗಳನ್ನು ಕ್ಷಿಪ್ರವಾಗಿ ತಲುಪಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಆದರೆ ನೆರೆಯ ಹಾಗೂ ಇತರ ರಾಜ್ಯಗಳಿಗೆ ಮಂಗಳೂರಿನಿಂದ ನೇರ ಸಾಗಾಣಿಕೆ ಇಲ್ಲದಿರುವುದರಿಂದ ಮಂಗಳೂರಿನಿಂದ ಬೆಂಗಳೂರಿನ ಮೂಲಕ ಕಳುಹಿಸಲಾಗುತ್ತಿದೆ. ಇದರಿಂದ ವಿಳಂಬವಾಗುವ ಸಾಧ್ಯತೆ ಇದೆ. ಇವುಗಳನ್ನು ರವಾನಿಸುವಾಗ ಅಂಚೆ ಕಛೇರಿಗೆ  ತುರ್ತು ಅಗತ್ಯದ ಬಗ್ಗೆ ತಿಳಿಸಿದರೆ, ಶೀಘ್ರ ರವಾನೆ ಹಾಗೂ ಬಟವಾಡೆಯ ವ್ಯವಸ್ಥೆಗಳನ್ನು ಮಾಡಲು ಸಹಾಯಕವಾಗುತ್ತದೆ. 

ತಂತ್ರಜ್ಞಾನ ಆಧಾರಿತ ಇ ಮನಿಯಾರ್ಡರ್ ಸೇವೆ


ಲಾಕ್‍ಡೌನ್ ಅವಧಿಯಲ್ಲಿ ಕುಟುಂಬಿಕರಿಗೆ ಹಣ ಕಳಿಸುವ ಅಗತ್ಯತೆಗಳು ಎಲ್ಲರಿಗೂ ಬರಬಹುದು.  ಇದಕ್ಕಾಗಿ ಅಂಚೆ ಕಚೇರಿಯಲ್ಲಿ ವಿಶೇಷವಾದ ಇ ಮನಿಯಾರ್ಡರ್ ಸೇವೆ ಲಭ್ಯವಿದೆ. ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದಿರುವುದು ಈ ಸೇವೆಯ ಮೇಲೆ ಪರಿಣಾಮ ಬೀರುವುದಿಲ್ಲ. ಇಲೆಕ್ಟ್ರಾನಿಕ್  ತಂತ್ರಜ್ಞಾನದ ಮೂಲಕ ಪಿನ್ ಕೋಡ್ ಆಧಾರಿತವಾಗಿ ಕಳುಹಿಸುವ ವ್ಯವಸ್ಥೆ ಇರುವುದರಿಂದ ದೇಶದ ಯಾವುದೇ ಭಾಗಕ್ಕೂ ಇ  ಮನಿಯಾರ್ಡರ್  ಮೂಲಕ ಹಣವನ್ನು ಸಾರ್ವಜನಿಕರು ಅಂಚೆ ಕಚೇರಿಗಳಿಂದ ಕಳುಹಿಸಬಹುದಾಗಿದೆ.

ಸಾಮಾಜಿಕ ಭದ್ರತೆ ಯೋಜನೆಗಳ ಹಣ ಪಾವತಿ 


ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಈ-ಮನಿಯಾರ್ಡರ್ ಹಾಗೂ ಅಂಚೆ ಉಳಿತಾಯ ಖಾತೆಗಳ ಮೂಲಕ ಸಂಬಂಧಿಸಿದ ಫಲಾನುಭವಿಗಳಿಗೆ ಹಣವು ಅಂಚೆ ಕಛೇರಿಗಳಲ್ಲಿ ಪಾವತಿಯಾಗುತ್ತಿದ್ದು, ಕಳೆದ ಒಂದು ವಾರದಲ್ಲಿ ಸುಮಾರು 5500 ಫಲಾನುಭವಿಗಳಿಗೆ ಇ ಮನಿಯಾರ್ಡರ್‍ಗಳನ್ನು ಮಂಗಳೂರು ವಿಭಾಗದಲ್ಲಿ ವಿತರಿಸಲಾಗಿದೆ. ಇನ್ನೂ ಸುಮಾರು 24,0000 ಫಲಾನುಭವಿಗಳಿಗೆ ಈ ವಾರದಲ್ಲಿ ಇ ಮನಿಯಾರ್ಡರ್‍ಗಳನ್ನು ಪಾವತಿಸಲಾಗುತ್ತಿದೆ.

ವಿದ್ಯುತ್ ಬಿಲ್ ಪಾವತಿ 


ಮಂಗಳೂರು ಅಂಚೆ ವಿಭಾಗದ ಎಲ್ಲಾ ಇಲಾಖಾ ಮತ್ತು ಶಾಖಾ  ಅಂಚೆ ಕಛೇರಿಗಳಲ್ಲಿ ವಿದ್ಯುತ್ ಬಿಲ್ ಪಾವತಿ ಸೇವೆ ಲಭ್ಯವಿದ್ದು, ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು. ಲಾಕ್‍ಡೌನ್ ಅವಧಿಯಲ್ಲಿ ಮೆಸ್ಕಾಂ ಬಿಲ್ ಬಾರದಿದ್ದರೂ ಕೂಡ ಗ್ರಾಹಕರು ತಮ್ಮ ಆರ್.ಆರ್. ನಂಬರ್ ಹಾಗೂ ಮೆಸ್ಕಾಂ ಸಬ್ ಡಿವಿಷನ್ ಮಾಹಿತಿಯನ್ನು ಅಂಚೆ ಕಚೇರಿಯಲ್ಲಿ ನೀಡಿ ವಿದ್ಯುತ್ ಬಿಲ್ ಪಾವತಿ ಮಾಡಬಹುದಾಗಿದೆ.

ಮೊಬೈಲ್ ಮತ್ತು ಡಿ.ಟಿ.ಎಚ್. ರೀಚಾರ್ಜ್  


ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚಿನ ಅಂಗಡಿಗಳು ಮುಚ್ಚಿರುವುದರಿಂದ ಮೊಬೈಲ್/ ಡಿ.ಟಿ.ಎಚ್. ರೀಚಾರ್ಜ್ ಸೌಲಭ್ಯಗಳು ಕೂಡ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಯ ಮೂಲಕ ಗ್ರಾಹಕರು ತಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ಮೊಬೈಲ್/ ಡಿ.ಟಿ.ಎಚ್. ರೀಚಾರ್ಜ್ ಮಾಡಬಹುದಾಗಿದೆ. ಅಲ್ಲದೆ ಮೊಬೈಲ್ ಬ್ಯಾಂಕಿಂಗ್ ಮೂಲಕ ಮನೆಯಲ್ಲೇ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ವ್ಯವಹಾರದ ಸಂದರ್ಭದಲ್ಲಿ ಸಾರ್ವಜನಿಕರು ಅಂಚೆ ಕಛೇರಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಹಾಗೂ ಕರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಈ ಮೂಲಕ ವಿನಂತಿ. ಎಲ್ಲಾ ಅಂಚೆ ಕಛೇರಿಗಳಲ್ಲೂ ಸದ್ಯಕ್ಕೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಅಗತ್ಯ ಅಂಚೆ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಮತ್ತು ವಿವಿಧ ಸಾಮಾಜಿಕ ಭದ್ರತಾ  ಯೋಜನೆಯ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ಇಲಾಖೆ ಎಲ್ಲಾ ರೀತಿಯ ಕಾಳಜಿ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಬಲ್ಮಠ ವಿಭಾಗೀಯ ಕಛೇರಿಯ ವಾಟ್ಸಪ್ ಸಂಖ್ಯೆ   9448291072 ಗೆ ಸಂದೇಶ ಕಳುಹಿಸಬಹುದಾಗಿದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಲಾಕ್‍ಡೌನ್ ಸಂದರ್ಭ ಸಾರ್ವಜನಿಕರಿಗೆ ಅಂಚೆ ಇಲಾಖೆಯಲ್ಲಿ ಅಗತ್ಯ ಸೇವೆಗಳು ಲಭ್ಯ Rating: 5 Reviewed By: karavali Times
Scroll to Top