ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧೀನದಲ್ಲಿರುವ ನ್ಯಾಯಬೆಲೆ ಅಂಗಡಿಯ ಪಡಿತರ ಗ್ರಾಹಕರಿಗೆ ಪಾಸ್ ಹೊಂದಿದ ವಾಹನದಲ್ಲೇ ಪಡಿತರ ಅಕ್ಕಿ ವಿತರಿಸುತ್ತಿದ್ದ ವೇಳೆ ಇಂಟರ್‍ಸೆಪ್ಟರ್ ವಾಹನದಲ್ಲಿ ಬಂದ ಪೊಲೀಸರು ಏನೊಂದೂ ವಿಚಾರಿಸದೆ ಏಕಾಏಕಿ ಲಾಠಿ ಬೀಸಿ ಹಲ್ಲೆ ನಡೆಸಿದ್ದಲ್ಲದೆ ವಾಹನದ ಗಾಜುಗಳನ್ನೂ ಪುಡಿಮಾಡಿದ್ದಾರೆ ಎಂದು ವಾಹನ ಚಾಲಕರು ದೂರಿದ್ದಾರೆ.
ಈಗಾಗಲೇ ಸರಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಏಳು ಕೆಜಿ ಅಕ್ಕಿಯ ಬದಲಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದು, ಅದರಲ್ಲೂ ಕಡಿತಗೊಳಿಸಿದೆ. ಬಡವರು ಸಿಕ್ಕಿದ್ದು ಪುಣ್ಯ ಎಂದು ನ್ಯಾಯಬೆಲೆ ಅಂಗಡಿಗೆ ಅಕ್ಕಿಗೆ ಬಂದಿದ್ದು, ಇದನ್ನು ಸಹಕಾರಿ ಸಂಘದ ಮೂಲಕ ಪಾಸ್ ಪಡೆದ ಅಟೋ ರಿಕ್ಷಾಗಳಲ್ಲೇ ಸಾಗಾಟ ಮಾಡುತ್ತಿದ್ದ ವೇಳೆ ಮೆಲ್ಕಾರ್ ಜಂಕ್ಷನ್ನಿನ್ನಲ್ಲಿ ಇಂಟರ್‍ಸೆಪ್ಟರ್ ವಾಹನದಲ್ಲಿ ಬಂದ ಪೊಲೀಸರು ಅಟೋ ಚಾಲಕರಿಗೂ ಹಲ್ಲೆ ನಡೆಸಿ ಗಾಜುಗಳನ್ನೂ ಲಾಠಿ ಬೀಸಿ ಪುಡಿಗಟ್ಟಿದ್ದಾರೆ ಎಂದು ಅಟೋ ಚಾಲಕ ಮುತಾಲಿಬ್ ದೂರಿದ್ದಾರೆ.
ಈ ಬಗ್ಗೆ ತಾಲೂಕು ತಹಶೀಲ್ದಾರ್, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ನಗರ ಠಾಣಾಧಿಕಾರಿಗಳಿಗೆ ದೂರು ನೀಡಲು ದೂರವಾಣಿ ಕರೆ ಮಾಡಿದರೆ, ತುರ್ತು ಸಂದರ್ಭದಲ್ಲಿ ಯಾರೂ ದೂರವಾಣಿ ಕರೆ ಸ್ವೀಕಾರ ಮಾಡುತ್ತಿಲ್ಲ ಎಂದು ದೂರಿರುವ ಪಡಿತರ ಗ್ರಾಹಕರು ಕೊನೆಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಹಾಗೂ ಮಾಜಿ ಸಚಿವ ಬಿ ರಮಾನಾಥ ರೈ ಅವರ ಬಳಿ ಸಮಸ್ಯೆಯ ಗಂಭೀರತೆಯನ್ನು ಅಲವತ್ತುಕೊಂಡಿದ್ದಾರೆ.
ದೀರ್ಘ ಲಾಕ್‍ಡೌನ್‍ನಿಂದಾಗಿ ಹಸಿದು ಬಸವಳಿದಿರುವ ಜನರ ಹೊಟ್ಟೆ ಹಸಿವು ತಣಿಸಲು ಪಡಿತರ ಅಕ್ಕಿಯನ್ನು ಸರಕಾರ ಕಡಿತಗೊಳಿಸಿದರೂ, ಎರಡು ತಿಂಗಳ ಅಕ್ಕಿಯನ್ನು ಒಟ್ಟಿಗೆ ನೀಡುತ್ತಿದ್ದು, ಇದನ್ನು ಮನೆಗೆ ತಲುಪಿಸಲು ಪೊಲೀಸರು ಅವಕಾಶ ನೀಡದ ಬಗ್ಗೆ ಪಡಿತರ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸರಕಾರ ಪಡಿತರ ಅಕ್ಕಿ ವಿತರಣೆಗೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ, ತಾಲೂಕಾಡಳಿತಕ್ಕೆ ನಿರ್ದೇಶನ ನೀಡಿದರೂ ಪೊಲೀಸರಿಂದ ರಕ್ಷಣೆ ಕೊಡಿಸಲು ತಾಲೂಕಾಡಳಿತ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಅಟೋ ಚಾಲಕರು, ಪಾಣೆಮಂಗಳೂರು ಹಾಗೂ ಮೆಲ್ಕಾರ್ ನ್ಯಾಯಬೆಲೆ ಅಂಗಡಿಗೆ ಸಂಬಂಧಪಟ್ಟದಂತೆ ಮೆಲ್ಕಾರ್, ಪಾಣೆಮಂಗಳೂರು, ಬಂಗ್ಲೆಗುಡ್ಡೆ, ಬೋಗೋಡಿ, ರೆಂಗೇಲು, ಬೊಂಡಾಲ ಬೈಲು, ಬೋಳಂಗಡಿ ಮೊದಲಾದ ಕುಗ್ರಾಮದ ಪ್ರದೇಶಗಳಿಗೆ 25 ಕೆಜಿ ಯಿಂದ ಕ್ವಿಂಟಾಲ್ ವರೆಗೂ ಪಡಿತರ ಸಾಮಾಗ್ರಿ ಸಾಗಾಟ ನಡೆಸಬೇಕಾಗಿದೆ. ಇದನ್ನು ಜನ ನಡೆದುಕೊಂಡು ಸಾಗಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಈ ಕಾರಣಕ್ಕಾಗಿ ಸಹಕಾರಿ ಸಂಘದ ಮೂಲಕ ಪಾಸ್ ನೀಡಿ ಕರ್ತವ್ಯಕ್ಕೆ ನಿಯೋಜಿಸಿದ ನಿಟ್ಟಿನಲ್ಲಿ ಮಾನವೀಯತೆ ದೃಷ್ಟಿಯಿಂದ ಈ ಪಡಿತರ ಸಾಗಾಟದ ಕಾರ್ಯವನ್ನು ನಾವು ನಡೆಸುತ್ತಿದ್ದೇವೆ. ಆದರೂ ಪೊಲೀಸರು ಯಾವುದನ್ನೂ ವಿಚಾರಿಸದೆ ಲಾಠಿ ಪ್ರಯೋಗಿಸುತ್ತಿದ್ದಾರೆ. ಈಗಾಗಲೇ ಪೊಲೀಸರ ಲಾಠಿ ಏಟಿನಿಂದ ಕೈ-ಕಾಲು ನೋವುಂಟಾಗಿದೆ. ಪೊಲೀಸರು ಇಂತಹ ದೌರ್ಜನ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ನಾವು ಯಾವುದೇ ಕಾರಣಕ್ಕೂ ಪಡಿತರ ಸಾಗಾಟ ನಡೆಸುವುದಿಲ್ಲ. ಬೇಕಿದ್ದರೆ ಪೊಲೀಸರೇ ಅಥವಾ ತಾಲೂಕಾಡಳಿತವೇ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದಿದ್ದಾರೆ.
ಪಡಿತರ ಅಕ್ಕಿ ವಿತರಣೆಯಗೆ ಅಡ್ಡಿ ಪಡಿಸಿದ ಇಂಟರ್‍ಸೆಪ್ಟರ್ ವಾಹನದಲ್ಲಿದ್ದ ಪೊಲೀಸರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಅಗತ್ಯ ಸೇವೆ ಒದಗಿಸುವ ಮಂದಿಗೆ ನಡೆಸುವ ಪೊಲೀಸ್ ದೌರ್ಜನ್ಯದ ವಿರುದ್ದ ಪ್ರತಿಭಟನೆ ನಡೆಸುವುದಾಗಿ ವಾಹನ ಚಾಲಕರು ಹಾಗೂ ಪಡಿತರ ಗ್ರಾಹಕರು ಎಚ್ಚರಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ತಾಲೂಕಾಡಳಿತ ತಕ್ಷಣ ಎಚ್ಚೆತ್ತು ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
0 comments:
Post a Comment