ಆರಂಭದಿಂದಲೂ ಗಂಡನ ಜೊತೆ ಸೇರಿ ಗೂಂಡಾಗಿರಿ ಮೆರೆಯುವ ಮಹಿಳಾ ಅಧಿಕಾರಿಯ ದುರ್ವರ್ತನೆಗೆ ಹಿರಿಯ ಅಧಿಕಾರಿಗಳು ಕಡಿವಾಣ ಹಾಕುವರೇ?
ಬಂಟ್ವಾಳ (ಕರಾವಳಿ ಟೈಮ್ಸ್) : ದೇಶಾದ್ಯಂತ ಅಧಿಕಾರಿಗಳು ಮಹಾಮಾರಿ ಕೊರೋನಾ ವಿರುದ್ದದ ಹೋರಾಟವನ್ನು ಯುದ್ದೋಪಾದಿಯಲ್ಲಿ ಮಾಡುತ್ತಿದ್ದರೆ, ಬಂಟ್ವಾಳ ಪುರಸಭಾ ಪರಿಸರ ಅಧಿಕಾರಿ ಜಾಸ್ಮಿನ್ ಅವರು ಮಾತ್ರ ಇಲ್ಲಿನ ಪೌರ ಕಾರ್ಮಿಕರಿಗೆ ಅವೈಜ್ಞಾನಿಕ ರೀತಿಯಲ್ಲಿ ಟೆಂಪರೇಚರ್ ಚೆಕ್ ಮಾಡುವ ಮೂಲಕ ತೀವ್ರ ಆತಂಕಕ್ಕೆ ಕಾರಣರಾಗುತ್ತಿದ್ದಾರೆ. ಈಗಾಗಲೇ ಕೊರೋನಾ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿರುವ ಬಂಟ್ವಾಳದಲ್ಲಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವ ಪರಿಸರ ಅಧಿಕಾರಿಯ ವಿರುದ್ದ ತಕ್ಷಣದಿಂದ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಪುರವಾಸಿಗಳು ಆಗ್ರಹಿಸಿದ್ದಾರೆ.
ಸರಕಾರ ಈಗಾಗಲೇ ಕೊರೋನಾ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಕೈಗೊಳ್ಳುತ್ತಿದ್ದು, ಉಷ್ಣಾಂಶ ಪರೀಕ್ಷೆಗೆ ಆಧುನಿಕ ವೈಜ್ಞಾನಿಕ ಕಿಟ್ ಒದಗಿಸಲಾಗಿದೆ. ಯಾವುದೇ ಕಾರಣಕ್ಕೂ ವೈರಸ್ ಹರಡದಂತೆ ಮುನ್ನಚ್ಚರಿಕಾ ಕ್ರಮಕ್ಕೆ ಸರಕಾರ ಎಲ್ಲ ಅಧಿಕಾರಿಗಳಿಗೂ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆದರೂ ಬಂಟ್ವಾಳ ಪುರಸಭಾ ಪರಿಸರ ಅಧಿಕಾರಿ ಮಾತ್ರ ಇಲ್ಲಿನ ಪೌರ ಕಾರ್ಮಿಕರನ್ನು ಹಳೆ ಮಾದರಿಯ ಬಾಯಿಗೆ ಹಾಕುವ ಕಿಟ್ ಮೂಲಕ ಉಷ್ಣಾಂಶ ಪರೀಕ್ಷೆ ನಡೆಸುತ್ತಿದ್ದು, ಒಬ್ಬರ ಬಾಯಿಗೆ ಹಾಕಿದ ಅದೇ ಕಿಟ್ ನ್ನು ಇನ್ನೊಬ್ಬ ಕಾರ್ಮಿಕರಿಗೂ ಬಳಸುತ್ತಿದ್ದಾರೆ. ಜನರ ಆರೋಗ್ಯ ರಕ್ಷಣೆಗಾಗಿ ನಿರಂತರ ಬೀದಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಬಗ್ಗೆ ಅಧಿಕಾರಿ ಕೈಗೊಳ್ಳುವ ಕ್ರಮ ಅತ್ಯಂತ ಆತಂಕವನ್ನು ಉಂಟು ಮಾಡಿದೆ.
ಈ ಬಗ್ಗೆ ಪತ್ರಿಕ್ರಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಅವರು ಇಂತಹ ಅವೈಜ್ಞಾನಿಕ ಕ್ರಮದಿಂದ ಟೆಂಪರೇಚರ್ ಚೆಕ್ ಮಾಡಲು ಅವಕಾಶವೇ ಇಲ್ಲ. ವೈಜ್ಞಾನಿಕ ಉಪಕರಣದ ಮೂಲಕ ಮಾತ್ರ ಚೆಕ್ ಮಾಡಬೇಕಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಇದು ಅನಿವಾರ್ಯ ಕೂಡಾ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಆರಂಭದಿಂದಲೂ ಪತಿಯೊಂದಿಗೆ ಸೇರಿ ದರ್ಪ ಮೆರೆಯುತ್ತಿರುವ ಈ ಮಹಿಳಾ ಅಧಿಕಾರಿಯ ಬಗ್ಗೆ ಈಗಾಗಲೇ ಹಲವು ಆರೋಪಗಳು ಕೇಳಿ ಬಂದಿದ್ದು, ಹಿರಿಯ ಅಧಿಕಾರಿಗಳಿಗೂ ಸಾರ್ವಜನಿಕರು ದೂರಿಕೊಂಡಿದ್ದಾರೆ. ಆದರೆ ಕ್ರಮ ಮಾತ್ರ ಜರುಗಿಲ್ಲ ಎನ್ನಲಾಗಿದೆ. ಜನರೊಂದಿಗೆ ದರ್ಪದಿಂದಲೇ ವರ್ತಿಸುವ ಪರಿಸರ ಅಧಿಕಾರಿ ಸ್ವತಃ ಪುರಸಭಾ ಮುಖ್ಯಾಧಿಕಾರಿಯನ್ನೇ ಯಾಮಾರಿಸುತ್ತಿದ್ದಾರೆ. ಮುಖ್ಯಾಧಿಕಾರಿ ಗಮನಕ್ಕೆ ಬಾರದೆ ಇವರು ಪೌರ ಕಾರ್ಮಿಕರನ್ನು ಅವೈಜ್ಞಾನಿಕ ಕ್ರಮದಿಂದ ಟೆಂಪರೇಚರ್ ಚೆಕ್ ಮಾಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಯವರು ಪರಿಸರ ಅಧಿಕಾರಿಗೆ ಕಾರಣ ಕೇಳಿ ನೋಟೀಸು ಕೂಡಾ ಜಾರಿ ಮಾಡಿದ್ದಾರೆ ಎನ್ನಲಾಗಿದೆ.
ಪುರಸಭಾ ವ್ಯಾಪ್ತಿಯ ತ್ಯಾಜ್ಯ ಸಮಸ್ಯೆ ಪರಿಹಾರದ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ದೂರಿಕೊಂಡರೆ ಅದಕ್ಕೂ ಪರಿಸರ ಅಧಿಕಾರಿ ಕವಡೆ ಕಿಮ್ಮತ್ತು ನೀಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಎಲ್ಲರ ಜೊತೆಯೂ ದರ್ಪದಿಂದಲೇ ವರ್ತಿಸುವ ಇವರಲ್ಲಿ ಸೌಜನ್ಯದ ವರ್ತನೆ ಎಂಬುದೇ ಇಲ್ಲ ಎಂದು ದೂರಲಾಗುತ್ತಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಇವತ್ತಿಗು ತ್ಯಾಜ್ಯ ಸಮರ್ಪಕ ನಿರ್ವಹಣೆಯಾಗದೆ ಸಾಂಕ್ರಾಮಿಕ ರೋಗ ಭೀತಿ ಇನ್ನೂ ಇದೆ.
ಅಲ್ಲದೆ ಕೊವಿಡ್ ವೈರಸ್ ನಿಯಂತ್ರಣಕ್ಕಾಗಿ ಎಂಬ ನೆಪವೊಡ್ಡಿ ಬೀದಿಗಿಳಿದಿರುವ ಈ ಮಹಿಳಾ ಅಧಿಕಾರಿ ಜನರ ಮೇಲೆ ಲಾಠಿ ಬೀಸುತ್ತಿದ್ದು, ಇವರ ಕಾರ್ಯವೈಖರಿ ಪೊಲೀಸರನ್ನೂ ಮೀರುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಪೊಲೀಸರೂ ಕೂಡಾ ಜನತಾ ಕರ್ಫ್ಯೂವನ್ನು ಅತ್ಯಂತ ನಾಜೂಕಿನಿಂದ ನಿಭಾಯಿಸುತ್ತಿದ್ದು, ಜನಸ್ನೇಹಿಯಾಗಿ ವರ್ತಿಸುತ್ತಿರುವ ಮಧ್ಯೆ ಪರಿಸರ ಅಧಿಕಾರಿಯ ವರ್ತನೆ ಕೆಲವೊಮ್ಮೆ ಚಕಮಕಿ-ಸಂಘರ್ಷಕ್ಕೂ ಕಾರಣವಾಗುತ್ತಿದೆ. ಸಾರ್ವಜನಿಕರೊಂದಿಗೆ ದರ್ಪದಿಂದ ವರ್ತಿಸುವುದಲ್ಲದೆ ಜನರ ವಿರುದ್ದ ಸುಳ್ಳು ಪೊಲೀಸ್ ದೂರುಗಳನ್ನೂ ನೀಡುತ್ತಿದ್ದು, ತನ್ನ ತಾಳಕ್ಕೆ ಮಣಿಯದೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಇತರ ಸಿಬಂದಿಗಳ ವಿರುದ್ದವೂ ಕತ್ತಿ ಮಸೆಯುತ್ತಿರುವ ಇವರ ಕ್ರಮ ಪುರಸಭೆಗೇ ಕಳಂಕ ತರುವ ಸನ್ನಿವೇಶ ನಿರ್ಮಾಣವಾಗುತ್ತಿದೆ.
ಪರಿಸರ ಅಧಿಕಾರಿಯ ದುರ್ವರ್ತನೆಗೆ ತಕ್ಷಣ ಕಡಿವಾಣ ಹಾಕಿ ಪುರಸಭೆಯಿಂದಲೆ ಎತ್ತಂಗಡಿ ಮಾಡಿ ಬಂಟ್ವಾಳವನ್ನು ಸಂರಕ್ಷಿಸುವಂತೆ ಜನ ಜಿಲ್ಲಾಧಿಕಾರಿ ಅವರಿಗೆ ಆಗ್ರಹಿಸಿದ್ದಾರೆ.
0 comments:
Post a Comment