ಬೆಂಗಳೂರು (ಕರಾವಳಿ ಟೈಮ್ಸ್) : ಲಾಕ್‍ಡೌನ್ ಕಾರಣದಿಂದಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯವರ ವಿವಾಹವನ್ನು ಅಂದುಕೊಂಡಂತೆ ನೆರವೇರಿಸಲು ಆಗುತ್ತಿಲ್ಲ. ಇದಕ್ಕಾಗಿ ಕುಮಾರಸ್ವಾಮಿಯವರು ಈಗಾಗಲೇ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸದೆ ಅಭಿಮಾನಿಗಳು, ಬೆಂಬಲಿಗರು ಮನೆಯಿಂದಲೇ ತಮ್ಮ ಮಗನಿಗೆ ಹರಸಬೇಕೆಂದು ವಿಡಿಯೊ ಸಂದೇಶದ ಮೂಲಕ ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ. ಮಾಜಿ ಸಚಿವ ಎಂ. ಕೃಷ್ಣಪ್ಪ ಅವರ ಮೊಮ್ಮಗಳು ರೇವತಿಯನ್ನು ನಿಖಿಲ್ ಕುಮಾರಸ್ವಾಮಿ ಇಂದು ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್‍ಡಿಕೆ ಫಾರ್ಮ್‍ಹೌಸ್‍ನಲ್ಲಿ ವಿವಾಹ ನಡೆಯುತ್ತಿದ್ದು, ಪೂರ್ವ ನಿಗದಿಯಾಗಿದ್ದ ದಿನಾಂಕದಂದೇ ಮದುವೆ ನಡೆಯುತ್ತಿದೆ. ಎರಡು ಕುಟುಂಬದವರು ಹಾಗೂ ಕೆಲವು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆಯಲಿದ್ದು, ನಿಖಿಲ್ ಮತ್ತು ರೇವತಿ ವಿವಾಹ ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ನೆರವೇರಲಿದೆ.
ರಾಮನಗರದ ಅವರ ತೋಟದ ಮನೆಯಲ್ಲಿ ಎರಡೂ ಕುಟುಂಬಗಳ ಸುಮಾರು 50 ಜನರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ. ಕಳೆದ ರಾತ್ರಿ ಬೆಂಗಳೂರಿನಲ್ಲಿರುವ ಕುಮಾರಸ್ವಾಮಿ ಮನೆಯಲ್ಲಿ ಚಪ್ಪರದ ಪೂಜೆ ಅರಿಶಿನ ಶಾಸ್ತ್ರ ನೆರವೇರಿದ್ದು, ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಮಗನಿಗೆ ಅರಿಶಿನದ £ನೀರು ಹಾಕಿ ಶುಭ ಹಾರೈಸಿದ್ದಾರೆ.
ಅದ್ದೂರಿಯಾಗಿ ನೆರವೇರಿಸಲು ಆಯೋಜಿಸಿದ್ದ ನನ್ನ ಮಗನ ವಿವಾಹವನ್ನು ಸರಳವಾಗಿ 50-60 ಜನ ಆಪ್ತ ಬಂಧುಗಳ ಸಮ್ಮುಖದಲ್ಲಿ ಮಾಡುತ್ತಿದ್ದೇವೆ. ಕೊರೋನಾ ವೈರಸ್ ಲಾಕ್‍ಡೌನ್‍ನಿಂದಾಗಿ ಸರಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಪಾಲಿಸುವುದು ನಮಗೆ ಸದ್ಯಕ್ಕೆ ಅನಿವಾರ್ಯವಾಗಿದೆ. ಅಭಿಮಾನಿಗಳು, ಬೆಂಬಲಿಗರು ಯಾರೂ ಬೇಸರ ಮಾಡಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.
ಈ ಮಧ್ಯೆ ರಾಮನಗರ ಜಿಲ್ಲೆ ಕೊರೋನಾ ವೈರಸ್‍ಗೆ ಹಸಿರು ವಲಯದಲ್ಲಿ ಬಂದಿರುವುದು ಕುಮಾರಸ್ವಾಮಿ ಕುಟುಂಬಕ್ಕೆ ಸಂತೋಷದ ವಿಚಾರವಾಗಿದ್ದು, ಬೆಂಗಳೂರಿನ ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿರುವುದರಿಂದ ರಾಮನಗರ ತೋಟದ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
0 comments:
Post a Comment