ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ನಂದಾವರ ಎಂಬಲ್ಲಿ ನಡೆದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಯುವಕರ ಗುಂಪುಗಳೆರಡು ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದ್ದಲ್ಲದೆ ಮಾತಿನ ಚಕಮಕಿ ಬಳಿಕ ಘರ್ಷಣೆಗೆ ತಿರುಗಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಇಲ್ಲಿನ ಕಂಟ್ರಾಕ್ಟರ್ ಒಬ್ಬರಿಗೆ ಸೇರಿದ ಸಿಮೆಂಟ್ ಮಿಶ್ರಣ ಮಾಡುವ ಮಿಲ್ಲರ್ ಯಂತ್ರವೊಂದು ಕಳೆದ ಎರಡು ದಿನಗಳ ಹಿಂದೆ ಕಳವುಗೈಯಲ್ಪಟ್ಟಿತ್ತು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸ್ಥಳದಲ್ಲಿದ್ದ ಸೀಸಿ ಟೀವಿ ಫೂಟೇಜ್ ವಶಪಡಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ಈ ಮಧ್ಯೆ ಶನಿವಾರ ರಾತ್ರಿ ಯುವಕರ ಎರಡು ಗುಂಪು ನಂದಾವರ-ಬಸ್ತಿ ಎಂಬಲ್ಲಿ ಸೇರಿಕೊಂಡು ಪರಸ್ಪರ ಕಳ್ಳತನದ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದೆ ಎನ್ನಲಾಗಿದೆ. ಈ ವೇಳೆ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು ಕೈಮೀರಿ ಅದು ಘರ್ಷಣೆಯ ಹಂತಕ್ಕೂ ತಲುಪಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಕೈಮೀರುತ್ತಿರುವ ಬಗ್ಗೆ ಆತಂಕಿತರಾದ ಸ್ಥಳೀಯರು ತಕ್ಷಣ ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಲಾಕ್‍ಡೌನ್ ಹಿನ್ನಲೆಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿಗಳು ಹೆಚ್ಚುವರಿ ಪೊಲೀಸ್ ಬಲದೊಂದಿಗೆ ನಂದಾವರ ಪರಿಸರವನ್ನು ಸುತ್ತುವರಿದು ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಬಗ್ಗೆ ಯಾರಿಗೂ ಗಾಯಗಳಾದ ಬಗ್ಗೆ ತಿಳಿದು ಬಂದಿಲ್ಲ. ಠಾಣೆಯಲ್ಲಿ ಪ್ರಕರಣವೂ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment