ಡೆಲಿವರಿ ಬಾಯ್ ಮಾಡಿದ ವೀಡಿಯೋ ವೈರಲ್
ಕೋಮುವಾದಿ ಮನೋಭಾವ ತೋರಿದ ವ್ಯಕ್ತಿ ಬಗ್ಗೆ ವ್ಯಾಪಕ ಆಕ್ರೋಶ
ಮುಂಬೈ (ಕರಾವಳಿ ಟೈಮ್ಸ್) : ಕೋವಿಡ್-19 ಮಹಾಮಾರಿ ತಡೆಗಾಗಿ ದೇಶಕ್ಕೆ ದೇಶವೇ ಲಾಕ್‍ಡೌನ್ ಆಗಿ ತಿಂಗಳೇ ಕಳೆದಿವೆ. ತುರ್ತು ಪರಿಸ್ಥಿತಿ ಸಂದರ್ಭ ಜನ ಹೊಟ್ಟೆಗೆ ಹಿಟ್ಟು ಸಿಗದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಮಾನವೀಯತೆಗೇ ಸವಾಲಾಗುವ ಮನಸ್ಥಿತಿಗಳೂ ಅಲ್ಲಲ್ಲಿ ಕಾಣಸಿಗುತ್ತಿವೆ. ಇಂತಹದೇ ಘಟನೆಯೊಂದು ಮುಂಬೈಯಲ್ಲಿ ನಡೆದಿದೆ. ಇಲ್ಲಿನ 51 ವರ್ಷ ಪ್ರಾಯದ ವ್ಯಕ್ತಿಯೋರ್ವ ಆನ್‍ಲೈನ್ ಆರ್ಡರ್ ಮಾಡಿದ್ದ ದಿನಸಿ ಸಾಮಗ್ರಿಗಳನ್ನು ಮನೆಗೆ ಡೆಲಿವರಿ ಮಾಡಿದ ಸಿಬ್ಬಂದಿ ಮುಸ್ಲಿಂ ಎಂಬ ಕಾರಣಕ್ಕೆ ಅದನ್ನು ನಿರಾಕರಿಸಿ, ಆತನೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಇದೀಗ ಪೊಲೀಸರಿಂದ ಬಂಧನಕ್ಕೊಳಪಟ್ಟು ಜೈಲು ಸೇರಿದ್ದಾನೆ.
ಮುಂಬೈ ಮೀರಾ ರಸ್ತೆಯಲ್ಲಿರುವ ಸೃಷ್ಟಿ ಕಾಂಪ್ಲೆಕ್ಸ್ ನಿವಾಸಿ ಆನ್‍ಲೈನ್‍ನಲ್ಲಿ ಮಂಗಳವಾರ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದನು. ಅದನ್ನು 32 ವರ್ಷದ ಡೆಲಿವರಿ ಬಾಯ್ ಮನೆಗೆ ತಂದು ತಲುಪಿಸಿದ್ದನು. ಈ ವೇಳೆ ಆರೋಪಿಯ ಪತ್ನಿಯ ಕೈಯಲ್ಲಿ ಸಾಮಗ್ರಿಗಳನ್ನು ನೀಡಿ ವಾಪಸ್ ತೆರಳುತ್ತಿದ್ದ ವೇಳೆ ಆರೋಪಿಯು ಡೆಲಿವರಿ ಬಾಯ್ ಹೆಸರನ್ನು ಕೇಳಿದ್ದಾನೆ. ಆತ ಮುಸ್ಲಿಂ ಎಂದು ಗೊತ್ತಾದ ತಕ್ಷಣ ಡೆಲಿವರಿ ನೀಡಿದ್ದ ಸಾಮಗ್ರಿಗಳನ್ನು ವಾಪಸ್ ಆತನಿಗೆ ಕೊಡು ನಮಗೆ ಇದು ಬೇಡ ಎಂದು ಆರೋಪಿ ಪತ್ನಿಗೆ ಹೇಳಿದ್ದಾನೆ.
ಈ ದೃಶ್ಯವನ್ನು ಡೆಲಿವರಿ ಬಾಯ್ ವಿಡಿಯೋ ಮಾಡಿದ್ದು, ವಿಡಿಯೋದಲ್ಲಿ ಆರೋಪಿ ಹೇಗೆ ಡೆಲಿವರಿ ಬಾಯ್ ಜೊತೆ ಅಮಾನವೀಯವಾಗಿ ವರ್ತಿಸಿದ್ದಾನೆ ಎಂಬುದು ಸೆರೆಯಾಗಿದೆ. ನಾವು ಅಲ್ಪಸಂಖ್ಯಾತ ಸಮುದಾಯದವರಿಂದ ಡೆಲಿವರಿ ಪಡೆಯಲ್ಲ ಎಂದು ಆರೋಪಿ ಅವಮಾನಿಸಿದ್ದಾನೆ.
ದೇಶ ಇಂತಹ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲೂ ಜನರು ಜಾತಿ, ಧರ್ಮ ಎನ್ನುತ್ತಿರೋದು ನಿಜಕ್ಕೂ ದೇಶದ ಜನರ ಮಾನವೀಯತೆಯನ್ನೇ ಪ್ರಶ್ನಿಸುವಂತಹ ಸಂದರ್ಭ ಎದುರಾಗಿದೆ. ನಾನು ನನ್ನ ಜೀವವನ್ನು ಪಣಕ್ಕಿಟ್ಟು ದಿನಸಿ ಸಾಮಗ್ರಿಗಳನ್ನು, ಆಹಾರಗಳನ್ನು ಡೆಲಿವರಿ ಮಾಡುತ್ತಿದ್ದೇನೆ. ಆದರೂ ಜನರು ಯಾಕೆ ಹೀಗೆ ಮಾಡುತ್ತಿದ್ದಾರೆ? ನಾನು ನಡೆದ ಘಟನೆ ಬಗ್ಗೆ ಮನೆಮಂದಿ ಬಳಿ ಹೇಳಿದೆ. ನಿನ್ನ ಜೊತೆ ಆರೋಪಿ ವರ್ತಿಸಿದ್ದು ತಪ್ಪು, ಪೆÇಲೀಸರಿಗೆ ದೂರು ನೀಡು ಎಂದು ಅವರು ಹೇಳಿದರು. ಅದಕ್ಕೆ ನಾನು ಈ ಬಗ್ಗೆ ದೂರು ನೀಡಿದೆ ಎಂದು ಡೆಲಿವರಿ ಬಾಯ್ ತನ್ನ ಅಳಲು ತೋಡಿಕೊಂಡಿದ್ದಾನೆ.
ಈ ಬಗ್ಗೆ ಪೆÇಲೀಸರು ಪ್ರತಿಕ್ರಿಯಿಸಿ, ಡೆಲಿವರಿ ಬಾಯ್ ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎಲ್ಲಾ ನಿಯಮಗಳನ್ನು ಪಾಲಿಸಿಯೇ ಡೆಲಿವರಿ ನೀಡಿದ್ದನು. ಆದರೂ ಜಾತಿ, ಧರ್ಮದ ಆಧಾರದ ಮೇಲೆ ಆತ ನೀಡಿದ್ದ ಡೆಲಿವರಿಯನ್ನು ನಿರಾಕರಿಸಲಾಗಿದೆ. ಹೀಗಾಗಿ ಆರೋಪಿಯನ್ನು ನಾವು ಬಂಧಿಸಿದ್ದೇವೆ. ಧಾರ್ಮಿಕ ಭಾವನೆ ಹಾಗೂ ನಂಬಿಕೆಗಳಿಗೆ ಧಕ್ಕೆ ಬರುವಂತೆ ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾನೆ ಎಂದು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
0 comments:
Post a Comment