ನವದೆಹಲಿ (ಕರಾವಳಿ ಟೈಮ್ಸ್) : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಗ್ಗೆ 10 ಗಂಟೆಗೆ ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದು, ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಎಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಇಂದು ಟ್ವೀಟ್ ಮಾಡಿದೆ.
ದೇಶಾದ್ಯಂತ ಜಾರಿಗೊಳಿಸಲಾಗಿರುವ 21 ದಿನಗಳ ಲಾಕ್ ಡೌನ್ ನಾಳೆಗೆ ಅಂತ್ಯವಾಗುತ್ತಿದೆ. ಆದರೆ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಮುಂದುವರೆಸಲು ಕೆಂದ್ರ ಬಹುತೇಕ ತೀರ್ಮಾನ ಮಾಡಿದ್ದು ಇದಕ್ಕಾಗಿ ಅಗತ್ಯ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಎ.14 ರಂದು ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್ ಡೌನ್ ಮುಕ್ತಾಯಗೊಳ್ಳಲು ಇನ್ನು ಕೇವಲ ಒಂದು ದಿನ ಬಾಕಿ ಉಳಿದಿದೆ. ಈ ಹಿನ್ನೆಲೆ ಪ್ರಧಾನಿ ಮೋದಿಯವರು ಶನಿವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಲಾಕ್ ಡೌನ್ ವಿಸ್ತರಣೆ ಸಂಬಂಧ ವಿಡಿಯೋ ಸಂವಾದ ಮೂಲಕ ಮಹತ್ವದ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ .
ಇದೇ ವೇಳೆ ಸಂವಾದಲ್ಲಿ ಪ್ರಧಾನಿ ಮೋದಿಯವರಿಗೆ ಬಹುತೇಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ವಿಸ್ತರಣೆ ಮಾಡುವುದೆ ಒಳಿತು ಎಂಬ ಸಲಹೆ ಮಾಡಿದ್ದಾರೆ.
ಎಪ್ರಿಲ್ 30 ರವರೆಗೆ ದೇಶಾದ್ಯಂತ ಲಾಕ್ ಡೌನ್ ವಿಸ್ತರಿಸುವ ಬಗ್ಗೆ ಖಚಿತವಾಗಿರುವ ಸಂದರ್ಭದಲ್ಲಿ ಸೋಂಕಿನ ತೀವ್ರತೆ ಆಧರಿಸಿ ಜಿಲ್ಲೆಗಳನ್ನು ಮೂರು ವಲಯಗಳಾಗಿ ವಿಂಗಡಿಸಿ ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಸರಕಾರ ಯೋಜನೆ ರೂಪಿಸಿದೆ.
ಆರ್ಥಿಕತೆ ಚೇತರಿಕೆಗೆ ಗಮನ ಹರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸೋಂಕಿನ ತೀವ್ರತೆ ಕಡಿಮೆಯಿರುವಂತಹ ಪ್ರದೇಶಗಳಲ್ಲಿ ಲಾಕ್ಡೌನ್ ನಿರ್ಬಂಧಗಳ ಸಡಿಲಿಕೆಯ ಇಂಗಿತ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ಜಿಲ್ಲೆಗಳನ್ನು ವಿಂಗಡಿಸಲು ಸರಕಾರ ಸಿದ್ಧತೆ ಆರಂಭಿಸಿದೆ.
ಸೋಂಕಿನ ತೀವ್ರತೆ ಕಡಿಮೆಯಾಗಿರುವ ಪ್ರದೇಶಗಳಲ್ಲಿ ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಲಿಸಲಿದೆ.
0 comments:
Post a Comment