ವಿಟ್ಲ (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿಯಲ್ಲಿ ಕಳೆದ ವಾರ ಲಾಕ್‍ಡೌನ್ ಸಂದರ್ಭ ವಾರದ ಸಂತೆ ನಡೆಸಿದ್ದ ಕಾರಣಕ್ಕೆ ಸ್ವತಃ ತಾಲೂಕು ತಹಶೀಲ್ದಾರ್ ಭೇಟಿ ನೀಡಿ ಬಂದ್ ಮಾಡಿಸಿದ್ದರೂ ಸಂತೆ ಮಾರುಕಟ್ಟೆ ನಿರ್ವಾಹಕರಿಗೆ ಇನ್ನೂ ಬುದ್ದಿ ಬಂದಿಲ್ಲ. ಇಂದೂ ಕೂಡಾ ಮಾಣಿಯಲ್ಲಿ ಸಂತೆ ಮಾರುಕಟ್ಟೆ ನಿರ್ವಾಹಕ ವ್ಯಾಪಾರಿಗಳನ್ನು ಕರೆಸಿ ಸಂತೆ ಆರಂಭಿಸಿದ್ದಾನೆ. ಕಳೆದ ವಾರವೇ ಅಧಿಕಾರಿಗಳು ಇಲ್ಲಿನ ಸಂತೆ ಮಾರುಕಟ್ಟೆ ನಿರ್ವಾಹಕನ ಮೇಲೆ ಕಠಿಣ ಕ್ರಮ ಜರುಗಿಸಿದ್ದರೆ ಇಂದು ಇದು ಮರುಕಳಿಸುತ್ತಿರಲಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವೈರಸ್ ನಿಗ್ರಹಿಸುವ ನಿಟ್ಟಿನಲ್ಲಿ ದೇಶದ ಪ್ರಧಾನಿಯವರ ಕರೆಯ ಮೇರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ಜನ ಸಂದಣಿ ಸೇರುವ ಎಲ್ಲಾ ವ್ಯವಸ್ಥೆಗಳನ್ನೂ ನಿಷೇಧಿಸಲಾಗಿದೆ. ಹೀಗಿದ್ದರೂ ಜಿಲ್ಲಾಡಳಿತದ ನಿಯಮ ಮೀರಿ ಮಾಣಿಯಲ್ಲಿ ವಾರದ ಸಂತೆ ನಡೆಯುತ್ತಿದೆ ಎಂದರೆ ಇದರ ಹಿಂದೆ ನಿರ್ವಾಹಕರ ದರ್ಪದ ವರ್ತನೆಯೇ ಕೆಲಸ ಮಾಡುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.
ಇಂದು ಬೆಳಿಗ್ಗೆ ಸಂತೆ ಆರಂಭವಾಗುತ್ತಲೇ ಸಾರ್ವಜನಿಕರು ಸಂತೆ ನಿರ್ವಾಹಕರಿಗೆ ಜನರ ಹಿತದೃಷ್ಟಿಯಿಂದ ಸಂತೆ ನಿಲ್ಲಿಸುವಂತೆ ತಾಕೀತು ಮಾಡಿದರೂ ಅದಕ್ಕೆ ಸೊಪ್ಪು ಹಾಕದ ನಿರ್ವಾಹಕ ಸಂತೆ ಮುಂದುವರಿಸಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಪೆÇೀಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಾರ್ವಜನಿಕರ ದೂರಿಗೆ ಸ್ಪಂದಿಸಿ ಸ್ಥಳಕ್ಕಾಗಮಿಸಿದ ಬಂಟ್ವಾಳ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಹಾಗೂ ವಿಟ್ಲ ಪೊಲೀಸ್ ಅಧಿಕಾರಿ ವಿನೋದ್ ರೆಡ್ಡಿ ಸಂತೆಯನ್ನು ಬಲವಂತವಾಗಿ ನಿಲ್ಲಿಸಿದ್ದಾರೆ.
ಕಠಿಣ ಸಂದರ್ಭದಲ್ಲಿ ಸರಕಾರದ ಹಾಗೂ ಅಧಿಕಾರಿಗಳ ಆದೇಶವನ್ನು ಎಚ್ಚರಿಕೆ ನೀಡಿದ ಹೊರತಾಗಿಯೂ ಎರಡನೇ ಬಾರಿಗೆ ಉಲ್ಲಂಘಿಸಿದ ಇಲ್ಲಿನ ಸಂತೆ ನಿರ್ವಾಹನಿಗೆ ನೀಡಿದ ಸುಂಕ ವಸೂಲಾತಿ ಬಿಡ್ಡನ್ನು ತಕ್ಷಣ ರದ್ದುಗೊಳಿಸಬೇಕು. ಈತನ ವಿರುದ್ದ ಕಠಿಣ ಕ್ರಮ ಕೈಗೊಂಡು ದಂಡ ವಿಧಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಈತನಿಗೆ ಬಿಡ್ಡಿಂಗ್‍ನಲ್ಲಿ ಭಾಗವಹಿಸಲು ಅವಕಾಶ ನೀಡದಂತೆ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment