ಪೊಲೀಸರ ಸಹಕಾರದಿಂದ ತಾಯಿಯನ್ನು ಸೇರಿದ ಮಗ
ಹೈದರಾಬಾದ್ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಮಧ್ಯೆ ಮನೆಗೆ ಬರಲಾಗದೇ ಪರದಾಡುತ್ತಿದ್ದ ಮಗನಿಗಾಗಿ ತೆಲಂಗಾಣದಲ್ಲಿ ತಾಯಿಯೊಬ್ಬರು ಏಕಾಂಗಿಯಾಗಿ ಸ್ಕೂಟಿಯಲ್ಲಿ ಬರೋಬ್ಬರಿ 1,400 ಕಿಮೀ ಪ್ರಯಾಣಿಸಿ ಮಗನನ್ನು ಮನೆಗೆ ಕರೆತಂದಿದ್ದಾರೆ. ತಾಯಿಯೊಬ್ಬಳು ತನ್ನ ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಸಿದ್ದ ಎಂಬುದು ಮತ್ತೊಮ್ಮೆ ಜಗತ್ತಿನ ಮುಂದೆ ಸಾಬೀತಾದಂತಾಗಿದೆ.
ತೆಲಂಗಾಣದ ನಿಝಾಮಾಬಾದ್‍ನಲ್ಲಿರುವ ಬೋಧಾನ್ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕಿಯಾಗಿರುವ ರಝಿಯಾ ಬೇಗಂ ತನ್ನ ಮಗನಿಗಾಗಿ ಸಾವಿರಾರು ಕಿ.ಮೀ ಪ್ರಯಾಣಿಸಿದ್ದಾರೆ. ಮಗ ಮುಹಮ್ಮದ್ ನಿಝಾಮುದ್ದೀನ್ (19) ಹೈದರಾಬಾದಿನ ನಾರಾಯಣ ವೈದ್ಯಕೀಯ ಅಕಾಡೆಮಿ ಅಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಾರ್ಚ್ 12ರಂದು ಸ್ನೇಹಿತನ ತಂದೆಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆತನ ಜೊತೆ ನಿಝಾಮುದ್ದೀನ್ ಆಂಧ್ರ ಪ್ರದೇಶದ ನೆಲ್ಲೂರಿಗೆ ತೆರೆಳಿದ್ದನು. ಬಳಿಕ ಅಲ್ಲಿಂದ ಬೋಧಾನ್‍ಗೆ ವಾಪಸ್ ಬರಲು ರೈಲ್ವೆ ಟಿಕೆಟ್ ಕೂಡ ಮಾರ್ಚ್ 23ರಂದು ಬುಕ್ ಮಾಡಿದ್ದನು. ಆದರೆ ಇದೇ ವೇಳೆ ಲಾಕ್‍ಡೌನ್ ಜಾರಿಯಾದ ಹಿನ್ನೆಲೆ ನಿಝಾಮುದ್ದೀನ್ ಬುಕ್ ಮಾಡಿದ್ದ ರೈಲ್ವೆ ಟಿಕೆಟ್ ರದ್ದು ಆಗಿತ್ತು. ಮನೆಗೆ ಹೋಗಲು ಆತನಿಗೆ ಯಾವುದೇ ವಾಹನವೂ ಸಿಗದ ಹಿನ್ನಲೆಯಲ್ಲಿ ಸ್ನೇಹಿತನ ಮನೆಯಲ್ಲಿಯೇ ಉಳಿದಿದ್ದನು.
ಪ್ರತಿದಿನ ತಾಯಿ ಬಳಿ ಪೊನ್‍ನಲ್ಲಿಯೇ ನಿಝಾಮುದ್ದೀನ್ ಮಾತನಾಡುತ್ತಿದ್ದನು. ನನಗೆ ಮನೆಗೆ ಬರಬೇಕು ಎನಿಸುತ್ತಿದೆ ಎಂದು ಹೇಳಿಕೊಂಡಿದ್ದನು. ಇತ್ತ ರಝಿಯಾ ಅವರಿಗೂ ಮಗನ ಚಿಂತೆ ಶುರುವಾಗಿತ್ತು. ಹೀಗಾಗಿ ಬೋಧಾನ್ ಎಸಿಪಿ ಬಳಿ ಹೋಗಿ ಪರಿಸ್ಥಿತಿಯನ್ನು ವಿವರಿಸಿ ಮಗನನ್ನು ಕರೆತರಲು ಅನುಮತಿ ಪತ್ರವನ್ನು ಪಡೆದುಕೊಂಡು ಬಂದಿದ್ದರು. ಬಳಿಕ ಸೋಮವಾರ ಮನೆಮಂದಿಗೆ ಯಾರಿಗೂ ತಿಳಿಸದೆ ಬೆಳಗ್ಗೆ ಸ್ಕೂಟಿಯಲ್ಲಿ ರಝಿಯಾ ಮನೆಬಿಟ್ಟರು. ಬಳಿಕ ಹೈದರಾಬಾದ್ ತಲುಪಿದ ನಂತರ ಮಗನಿಗೆ ಕರೆಮಾಡಿ ನಾನು ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತಿದ್ದೇನೆ ಎಂದು ತಿಳಿಸಿದ್ದರು.
ಬೋಧಾನ್‍ನಿಂದ ನೆಲ್ಲೂರಿಗೆ ಸುಮಾರು 700 ಕಿಮೀ ಅಂತರವಿದೆ. ಈ ದೂರವನ್ನು ರಝಿಯಾ ಸ್ಕೂಟಿಯಲ್ಲಿಯೇ ಏಕಾಂಗಿಯಾಗಿಯೇ ಕ್ರಮಿಸಿದ್ದಾರೆ. ಚೆಕ್‍ಪೊಸ್ಟ್‍ಗಳಲ್ಲಿ ತಡೆಯುತ್ತಿದ್ದ ಪೊಲೀಸರಿಗೆ ಎಸಿಪಿ ಕೊಟ್ಟ ಪತ್ರವನ್ನು ತೋರಿಸಿ ಮುಂದೆ ಸಾಗುತ್ತಿದ್ದರು. ಮನೆಯಿಂದಲೇ ಊಟ, ತಿಂಡಿಯನ್ನೂ ರಝಿಯಾ ಕಟ್ಟಿಕೊಂಡು ಬಂದಿದ್ದರು. ಹಾಗೆಯೇ ಸ್ಕೂಟಿಗೆ ಪೆಟ್ರೋಲ್‍ಗಾಗಿ 5 ಲೀಟರ್ ಕ್ಯಾನೊಂದನ್ನು ಬಳಿಯಲ್ಲಿ ಕೊಂಡು ಹೋಗಿದ್ದರು. ಮಾರ್ಗ ಮಧ್ಯೆ ಸಿಗುತ್ತಿದ್ದ ಪೆಟ್ರೋಲ್ ಬಂಕ್‍ಗಳಲ್ಲಿ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು, 15 ರಿಂದ 20 ನಿಮಿಷ ಬ್ರೇಕ್ ಪಡೆದು ಊಟ-ತಿಂಡಿ ಮಾಡಿಕೊಂಡು ಮತ್ತೆ ಮುಂದೆ ಸಾಗುತ್ತಿದ್ದರು.
ಹೀಗೆ ಸ್ಕೂಟಿಯಲ್ಲಿಯೇ ಪ್ರಯಾಣಿಸಿ ಮಂಗಳವಾರ ಮಧ್ಯಾಹ್ನ ನೆಲ್ಲೂರು ತಲುಪಿದರು. ಆ ಬಳಿಕ ಅಲ್ಲಿ ಮಗನನ್ನು ಕರೆದುಕೊಂಡು ಮಂಗಳವಾರ ಸಂಜೆಯೇ ನೆಲ್ಲೂರು ಬಿಟ್ಟು ಬೋಧಾನ್ ಕಡೆ ಪ್ರಯಾಣ ಬೆಳೆಸಿದರು. ಬುಧವಾರ ಸಂಜೆ ತಾಯಿ-ಮಗ ಬೋಧಾನ್ ಬಂದು ತಲುಪಿದ್ದಾರೆ.
ತಾಯಿಯ ಬಗ್ಗೆ ಮಗ ನಿಝಾಮುದ್ದೀನ್ ಮಾತನಾಡಿ, ನನ್ನ ಅಮ್ಮ ನನಗಾಗಿ 23 ರಿಂದ 24 ಗಂಟೆ ಸುಮಾರು 700 ಕಿ.ಮೀ. ಒಬ್ಬರೇ ಸ್ಕೂಟಿಯಲ್ಲಿ ಬಂದಿದ್ದಾರೆ. ಲಾಕ್‍ಡೌನ್ ಮಧ್ಯೆಯೂ ನನಗಾಗಿ ಪೆÇಲೀಸರ ಅನುಮತಿ ಪಡೆದು ಇಷ್ಟು ದೂರ ಬಂದಿದ್ದಾರೆ. ಎರಡು ದಿನ ನನಗಾಗಿ ಅಮ್ಮ ಕಷ್ಟ ಪಟ್ಟಿದ್ದಾರೆ ಎಂದು ಹೇಳಿದ್ದಾನೆ.
ಇತ್ತ ರಝಿಯಾ ಅವರು ಪ್ರತಿಕ್ರಿಯಿಸಿ, ನನಗೆ ನನ್ನ ಮಗನ ಸುರಕ್ಷತೆ ಮುಖ್ಯವಾಗಿತ್ತು. ಆತ ಸ್ನೇಹಿತನ ಮನೆಯಲ್ಲಿ ಸುರಕ್ಷಿತವಾಗಿದ್ದನು. ಆದರೆ ನನಗೆ ಮನಸ್ಸು ತಡೆಯಲಿಲ್ಲ. ಆದ್ದರಿಂದ ಸ್ಕೂಟಿ ಹತ್ತಿ ಆತನನ್ನು ಕರೆತರಲು ಹೊರಟುಬಿಟ್ಟೆ. ನಾನು ಸುಮಾರು 25 ವರ್ಷದಿಂದ ಸ್ಕೂಟಿ ಚಲಾಯಿಸುತ್ತಿದ್ದೇನೆ. 14 ವರ್ಷಗಳ ಹಿಂದೆಯೇ ನನ್ನ ಪತಿ ತೀರಿಕೊಂಡರು. ಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತುಂಬಾ ದೂರದ ಪ್ರಯಾಣ ಸ್ಕೂಟಿಯಲ್ಲಿಯೇ ಮಾಡಿದ್ದೇನೆ. ಹೀಗಾಗಿ ನೆಲ್ಲೂರು ತಲುಪುವುದು ನನಗೆ ಕಷ್ಟ ಅನಿಸಲಿಲ್ಲ. ಅದರಲ್ಲೂ ಪೊಲೀಸರ ಸಹಕಾರದಿಂದ ನಾನು ಇಂದು ನನ್ನ ಮಗನನ್ನು ಮನೆಗೆ ಕರೆತಂದಿದ್ದೇನೆ, ಪೊಲೀಸರಿಗೆ ಧನ್ಯವಾದ ಎಂದು ತಾಯಿ ರಝಿಯಾ ತಿಳಿಸಿದ್ದಾರೆ.
ರಜಿಯಾ ಅವರ ಬಗ್ಗೆ ಬೋಧಾನ್ ಎಸಿಪಿ ಅವರು ಮಾತನಾಡಿ, ಅವರು ತುಂಬಾ ಧೈರ್ಯಶಾಲಿ ಮಹಿಳೆ. ಮೊದಲು ಅವರು ನನ್ನ ಬಳಿ ಮಗನನ್ನು ಕರೆದುಕೊಂಡು ಬರಲು ಅನುಮತಿ ಕೇಳಿದಾಗ ಕಾರಿನಲ್ಲಿ ಮಗನನ್ನು ಕರೆದುಕೊಂಡು ಬನ್ನಿ ಎಂದು ಸಲಹೆ ನೀಡಿದ್ದೆ. ಆಗ ಅವರು ನನ್ನ ಬಳಿ ಅಷ್ಟು ಹಣವಿಲ್ಲ, ನಾನು ಸ್ಕೂಟಿಯಲ್ಲಿಯೇ ಮಗನನ್ನು ಕರೆತರುತ್ತೇನೆ ದಯವಿಟ್ಟು ಅನುಮತಿ ನೀಡಿ ಎಂದು ಮನವಿ ಮಾಡಿದ್ದರು. ಅಲ್ಲದೇ ರಾತ್ರಿ ವೇಳೆ ಕೂಡ ನಿರ್ಜನ ರಸ್ತೆ ಮಾರ್ಗದಲ್ಲಿ, ಅರಣ್ಯ ಮಾರ್ಗದಲ್ಲಿ ಧೈರ್ಯಗೆಡದೆ ಪ್ರಯಾಣಿಸಿದ್ದಾರೆ. ಚೆಕ್‍ಪೆÇೀಸ್ಟ್ ಬಳಿ ಪೊಲೀಸರು ಹೀಗೆ ಒಬ್ಬರೇ ಹೋಗುವುದು ಸುರಕ್ಷಿತವಲ್ಲ ಎಂದು ಹೇಳಿದರೂ ಅವರು ಮಗನಿಗಾಗಿ ನಾನು ಹೋಗಲೇಬೇಕು ಎಂದು ಮನವಿ ಮಾಡಿಕೊಂಡು ಹೋಗಿದ್ದಾರೆ. ಈ ತಾಯಿಯ ಧೈರ್ಯ, ಪ್ರೀತಿ ನಿಜಕ್ಕೂ ಮೆಚ್ಚಲೇಬೇಕು ಎಂದು ಪ್ರತಿಕ್ರಯಿಸಿದ್ದಾರೆ.
0 comments:
Post a Comment