ಮಂಗಳೂರು (ಕರಾವಳಿ ಟೈಮ್ಸ್) : ರಾಜ್ಯ ಸರಕಾರ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬರಲು ವಿಫಲವಾಗಿರುವ ಹಿನ್ನಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಬಾಕಿಯಾಗಿರುವ ಕಾರ್ಮಿಕರು ಇನ್ನೂ ಅತಂತ್ರರಾಗಿಯೇ ದಿನದೂಡುವಂತಾಗಿದೆ.
ಸರಕಾರ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಲು ವ್ಯವಸ್ಥೆ ಮಾಡುತ್ತಿದೆ ಎಂಬ ವದಂತಿ ನಂಬಿದ ವಲಸೆ ಕಾರ್ಮಿಕರು ಮಂಗಳವಾರ ನಗರದ ಪುರಭವನದ ಮುಂಭಾಗ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಎರಡು ವಾರಗಳ ಹಿಂದೆ ವದಂತಿ ನಂಬಿ ಮುಂಬೈನಲ್ಲಿ ಸಾವಿರಾರು ವಲಸೆ ಕಾರ್ಮಿಕರು ರೈಲ್ವೇ ಸ್ಟೇಷನ್‍ಗೆ ಬಂದಿದ್ದರು. ಆ ವೇಳೆ ಪರಿಸ್ಥಿತಿ ನಿಭಾಯಿಸಲು ಪೆÇಲೀಸರು ಹೆಣಗಾಡಿದ್ದರು. ಇದೇ ರೀತಿಯ ಸನ್ನಿವೇಶ ಮಂಗಳೂರಿನಲ್ಲೂ ಮಂಗಳವಾರ ಕಂಡು ಬಂತು.
ಜಿಲ್ಲಾಡಳಿತ ತಮ್ಮನ್ನು ಸ್ವಗ್ರಾಮಗಳಿಗೆ ಕಳಿಸಲಿದೆ ಎಂಬ ವದಂತಿ ನಂಬಿದ ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮಂಗಳೂರಿನ ಟೌನ್‍ಹಾಲ್‍ನಲ್ಲಿ ಕಾಣಿಸಿಕೊಂಡರು. ಸಾಮಾಜಿಕ ಅಂತರ ಪಾಲಿಸದೆ ಗುಂಪು ಸೇರಿದ್ದರು. ಸರಕಾರ ಇಂತಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದು ಕೇವಲ ವದಂತಿ ಎಂದರೂ ಕಾರ್ಮಿಕರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.
ಕಾರ್ಮಿಕರು ಊರಿಗೆ ಹೋಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ದುಡಿಯುತ್ತಿದ್ದ ಸುಮಾರು 1 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಬಂದು ಸೇರಿದ್ದರು. ಕೆಲ ಕಾರ್ಮಿಕರು ಊರಿಗೆ ಹೋಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ಬಹುತೇಕರು ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರಾಗಿದ್ದು, ಕಳೆದ ಎರಡು ದಿನಗಳಲ್ಲಿ 60 ಬಸ್‍ಗಳಲ್ಲಿ 780 ಕಾರ್ಮಿಕರನ್ನು ಕಳುಹಿಸಲಾಗಿತ್ತು. ಹೀಗಾಗಿ ಇನ್ನುಳಿದ ಕಾರ್ಮಿಕರು ತಮ್ಮ ತಮ್ಮ ಊರಿಗೆ ಹೋಗಲೆಂದು ಜಿಲ್ಲಾಡಳಿತದ ನೆರವಿಗಾಗಿ ಕಾಯುತ್ತಿದ್ದಾರೆ. ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕೊನೆಗೂ ಕಾರ್ಮಿಕರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಕಾರ್ಮಿಕರನ್ನು ಊರಿಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಲಾಕ್‍ಡೌನ್ ಇದೀಗ ಒಂದೂವರೆ ತಿಂಗಳು ಸಮೀಪಿಸುತ್ತಾ ಬರುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ಬಾಕಿಯಾಗಿರುವ ವಲಸೆ ಕಾರ್ಮಿಕರು ಇನ್ನೂ ಅತಂತ್ರ ಸ್ಥಿತಿಯಲ್ಲೇ ದಿನದೂಡುತ್ತಿದ್ದಾರೆ. ಆರಂಭದಿಂದ ವಲಸೆ ಕಾರ್ಮಿಕರ ಬಗ್ಗೆ ಸರಕಾರ ಸ್ಪಷ್ಟ ನಿರ್ಧಾರಕ್ಕೆ ಬರಬೇಕು ಎಂಬ ಆಗ್ರಹ ಕೇಳಿ ಬಂದಿತ್ತಾದರೂ ಇದುವರೆಗೂ ಸರಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದ ಹಿನ್ನಲೆಯಲ್ಲಿ ವಲಸೆ ಕಾರ್ಮಿಕರ ಬವಣೆ ಇನ್ನೂ ಮುಂದುವರಿದಿದೆ. ಇನ್ನಾದರೂ ಸರಕಾರ ಸಕಾಲದಲ್ಲಿ ಎಚ್ಚೆತ್ತುಕೊಂಡು ವಲಸೆ ಕಾರ್ಮಿಕರು ಹಾಗೂ ಲಾಕ್‍ಡೌನಿನಿಂದ ಅಲ್ಲಲ್ಲಿ ಬಾಕಿಯಾದ ಜನರನ್ನು ತವರಿಗೆ ತಲುಪಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
0 comments:
Post a Comment