ಮಂಗಳೂರು (ಕರಾವಳಿ ಟೈಮ್ಸ್) : ಲಾಕ್ ಡೌನ್ ಆದೇಶವನ್ನು ಮುಂದಿರಿಸಿ ಕೋರೊನಾ ಸೋಂಕಿನ ಕಾರಣವೊಡ್ಡಿ ಕೇರಳ ಗಡಿಭಾಗದ ಕಾಸರಗೋಡಿನ ರೋಗಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕಿತ್ಸೆ ನಿರಾಕರಿಸುತ್ತಿರುವ ಅಮಾನವೀಯ ಘಟನೆ ನಡೆದಿತ್ತು. ಆದರೆ ಕೇರಳದ ಯುವ ಜನತೆ ಹಾಗೂ ಸರ್ಕಾರದ ಅಗ್ನಿಶಾಮಕ ದಳ ಕರ್ನಾಟಕದ ಅನಾರೋಗ್ಯ ಪೀಡಿತರ ಸೌಖ್ಯಕ್ಕಾಗಿ ಪ್ರಯತ್ನಶೀಲವಾಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೊಂದು ಇಲ್ಲಿದೆ.
ಮಂಗಳೂರು ಮೂಲದ ಕ್ಯಾನ್ಸರ್ ರೋಗಿಯೋರ್ವರಿಗೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಟ್ಟಪಾಲಂನ ಕಾಯರಂಪಾಲ ಆಯುರ್ವೇದ ಆಸ್ಪತ್ರೆಯಿಂದ ಔಷಧಿ ಅಗತ್ಯವಾಗಿ ಬೇಕಿತ್ತು. ಆದರೆ ಲಾಕ್ ಡೌನ್ ನಿಂದಾಗಿ ತಲಪಾಡಿ ಗಡಿ ದಾಟಲಾಗದ ಅನಿವಾರ್ಯ ಪರಿಸ್ಥಿತಿ ಎದಿರಾಗಿತ್ತು.
ಇದನ್ನು ಮನಗಂಡ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ದ.ಕ. ಜಿಲ್ಲಾಧ್ಯಕ್ಷೆ ಮಾಧುರಿ ಬೋಳಾರ್ ಅವರು ಮಂಜೇಶ್ವರದ ಸಿಐಟಿಯು ಅಧ್ಯಕ್ಷ, ಯುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕನಿಲ ಅವರಲ್ಲಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಪಂದಿಸಿದ ಅವರು ಅಗತ್ಯದ ಔಷಧಿ ಮಂಗಳೂರಿಗೆ ತಲುಪಿಸುವ ಭರವಸೆ ನೀಡಿದ್ದಾರೆ.
ಬಳಿಕ ಪ್ರಶಾಂತ್ ಕನಿಲ ಅವರು ತಮ್ಮ ಡಿವೈಎಫ್ಐ ಸಂಘಟನೆಯ ಮಿತ್ರರಾದ ಸಬಿಶ್ ಹಾಗೂ ಪಾಲಕ್ಕಾಡ್ ನಿವಾಸಿ ಜಿಥಿನ್, ರನ್ದೀಸ್ ಅವರ ಮೂಲಕ ಒಟ್ಟಂಪಾಲಂನ ಆಯುರ್ವೇದ ಕ್ಯಾನ್ಸರ್ ಆಸ್ಪತ್ರೆಯನ್ನು ಸಂಪರ್ಕಿಸಿ ಔಷಧಿಗಾಗಿ ಬೇಡಿಕೆ ಇಟ್ಟರು. ಬಳಿಕ ಕೇರಳ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಔಷಧಿಯನ್ನು ತಲುಪಿಸುವ ಜವಾಬ್ದಾರಿ ಹೊತ್ತುಕೊಂಡರು. ಪರಿಣಾಮ ಇದೀಗ ಕೇರಳದ ಒಟ್ಟಂಪಾಲನಿಂದ ಮಂಗಳೂರಿನ ರೋಗಿಯ ಮನೆಗೆ ಔಷಧಿ ತಲುಪಿದೆ. ಸಂಕಷ್ಟದ ಸಂದರ್ಭ ಕೇರಳದ ಯುವ ಜನರ ಸಹಕಾರದ ಮಾನವೀಯತೆಗೆ ಇದೀಗ ನಾಡಿನ ಜನ ಹಾಟ್ಸಪ್ ಎನ್ನುತ್ತಿದ್ದಾರೆ.
ಗಡಿ ಬಂದ್ ಆಗಿ ಮಾನವೀಯತೆಗೆ ಸವಾಲಾಗಿದ್ದ ಸಂದರ್ಭ ಸವಾಲನ್ನು ಸ್ವೀಕರಿಸಿ ನಾವು ಗಡಿಗಳನ್ನು ಮೀರಿ ಮಾನವೀಯತೆ ತೋರಿಸುತ್ತೇವೆ ಎಂದು ಕಮ್ಯೂನಿಸ್ಟ್ ಕಾರ್ಯಕರ್ತರು ತಿಳಿಸಿದ್ದಾರೆ.
0 comments:
Post a Comment