ಮಂಗಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ : ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ - Karavali Times ಮಂಗಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ : ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ - Karavali Times

728x90

1 April 2020

ಮಂಗಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ : ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ



ಕಾಸರಗೋಡು (ಕರಾವಳಿ ಟೈಮ್ಸ್) : ಕೇರಳದ ರೋಗಿಗಳಿಗೆ ಕರ್ನಾಟಕದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ  ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದುಹಾಕುವಂತೆ ಕೇರಳ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಪ್ರಕಟಿಸಿದೆ.

    ಕೇರಳ ಹೈಕೋರ್ಟ್ ಎಸೋಸಿಯೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಪ್ರಕಟಿಸಿದೆ. ಮಂಗಳೂರು ಮತ್ತು ಕೇರಳದ ಕಾಸರಗೋಡು ನಡುವೆ ಸಂಪರ್ಕಿಸುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಗಳ ಭಾಗವಾಗಿದೆ. ಆದ್ದರಿಂದ ಈ ರಸ್ತೆಗಳನ್ನು ದಿಗ್ಬಂಧನದಿಂದ ಮುಕ್ತವಾಗಿರಿಸುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕರ್ನಾಟಕವು ನಿರ್ಮಿಸಿರುವ ಗಡಿ ಪ್ರವೇಶ ದಿಗ್ಬಂಧನವನ್ನು ತಕ್ಷಣವೇ ತೆಗೆದುಹಾಕಬೇಕೆಂದು ನಾವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ. ಜೊತೆಗೆ ಯಾವುದೇ ವಿಳಂಬವಿಲ್ಲದೆ ಎರಡು ರಾಜ್ಯಗಳ ನಡುವಿನ ಗಡಿಯುದ್ದಕ್ಕೂ, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ರೋಗಿಗಳನ್ನು ಕರೆದೊಯ್ಯುವ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನ್ಯಾಯಮೂರ್ತಿ ಎ.ಕೆ. ಜಯಶಂಕರ್ ನಂಬಿಯಾರ್ ಹಾಗೂ ಶಾಜಿ ಪಿ. ಚಲಿ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

    ಭಾರತದ ಪ್ರಜೆ ದೇಶದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮುಕ್ತವಾಗಿ ಸಂಚರಿಸಬಹುದು ಎಂದು ಸಂವಿಧಾನದ 19 (1) (ಡಿ) ವಿಧಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಗಡಿ ದಿಗ್ಬಂಧನ ಸರಿಯಲ್ಲ. ಗಡಿ ದಿಗ್ಬಂಧನ ತೆರವು ಸ್ಥಗಿತವಾದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಗಳಿಗೆ ತೊಂದರೆಯಾಗಬಹುದು ಎಂದು ಹೈಕೋರ್ಟ್ ತಿಳಿಸಿದೆ.

    ಈ ಕುರಿತು ಟ್ವೀಟ್ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕಾಸರಗೋಡಿನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಬರುವವರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಸಾಮಾನ್ಯ ಸಂಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಚಿಕಿತ್ಸೆಗೆ ಬರುವವರಿಗೆ ಮಾತ್ರ ಎರಡು ರಾಜ್ಯಗಳ ನಡುವಿನ ಹೆದ್ದಾರಿಯನ್ನು ಮುಕ್ತಗೊಳಿಸಬೇಕು. ಕೊರೊನಾ ವಿರುದ್ಧದ ಹೋರಾಟ ಜಾತಿ, ಧರ್ಮ ಮತ್ತು ಗಡಿಯನ್ನು ಮೀರಿದ್ದು ಎಂದು ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ : ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ Rating: 5 Reviewed By: karavali Times
Scroll to Top