ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ವೈರಸ್ ನಿಯಂತ್ರಣಕ್ಕಾಗಿ ಹೇರಲ್ಪಟ್ಟ ಲಾಕ್ ಡೌನ್ ಸಂದರ್ಭ ಜನಪ್ರತಿನಿಧಿಗಳ ವಾರ್ ರೂಂ , ಸರಕಾರದ 24*7 ಕಂಟ್ರೋಲ್ ರೂಂಗಳಿದ್ದರೂ ಅನಿವಾರ್ಯ ಪರಿಸ್ಥಿತಿಯಲ್ಲಿ ಇವುಗಳಿಗೆ ಸಂಪರ್ಕಿಸಿದರೂ ಸ್ಪಂದನೆ ಶೂನ್ಯವಾಗಿದ್ದು, ಗ್ರಾಮೀಣ ಪ್ರದೇಶಗಳ ಜನ ಅನ್ನಾಹಾರಕ್ಕಾಗಿ ಪರದಾಡುವ ಸ್ಥಿತಿ ಉಂಟಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕೆಲವು ನಗರ ಪ್ರದೇಶಗಳಲ್ಲಿ ಕೆಲವು ಸೇವಾನಿರತ ಸಂಘಸಂಸ್ಥೆಗಳು ದಿನನಿತ್ಯದ ಆಹಾರ ಪದಾರ್ಥಗಳನ್ನು ನೀಡಿದ್ದು ಹೊರತು ಪಡಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಕುಟುಂಬಗಳು ಇನ್ನೂ ಅನ್ನಾಹಾರಕ್ಕಾಗಿ ಪರದಾಡುತ್ತಿದ್ದಾರೆ.
ಬಿಪಿಎಲ್ ಬಳಕೆದಾರರಿಗೆ ಸಾಮಾನ್ಯವಾಗಿ ಸಿಗುತ್ತಿರುವ ಅಕ್ಕಿ ಹೊರತಪಡಿಸಿದರೆ ಜನಸಾಮಾನ್ಯರಿಗೆ ಕೇಂದ್ರ, ಮತ್ತು ರಾಜ್ಯದ ಪರಿಹಾರ ಯೋಜನೆಗಳೇ ತಲುಪುತ್ತಿಲ್ಲ ಎಂದಿರುವ ಹಾರೂನ್ ರಶೀದ್ ಜನರ ಬವಣೆ ಹೇಳಲು ಕ್ಷೇತ್ರದ ಜನಪ್ರತಿನಿಧಿಗಳ ವಾರ್ ರೂಂಗೆ ಕರೆ ಮಾಡಿದರೆ ಮೀಟಿಂಗಲ್ಲಿದ್ದಾರೆ, ಮತ್ತೆ ಕರೆ ಮಾಡಿ, ನಂಬರ್ ಕೊಡಿ ಎಂಬಿತ್ಯಾದಿ ಉತ್ತರಗಳು ದೊರೆಯುತ್ತದೆಯೇ ವಿನಃ ಸ್ಪಂದನೆ ಮಾತ್ರ ಶೂನ್ಯ. ಇತ್ತ ಸರಕಾರದ ಕಂಟ್ರೋಲ್ ರೂಂಗೆ ಕರೆ ಮಾಡಿದರೂ ದೊರೆಯುವ ಉತ್ತರ ಇದಕ್ಕಿಂತ ಭಿನ್ನವಾಗಿಲ್ಲ. ಅಧಿಕಾರಿಗಳಂತೂ ಜನರ ಕರೆ ಸ್ವೀಕರಿಸುವಷ್ಟು ಸೌಜನ್ಯ ಉಳಿಸಿಕೊಂಡಿಲ್ಲ. ಒಂದು ವೇಳೆ ಕರೆ ಸ್ವೀಕರಿಸಿದರೂ ಜನರ ಬವಣೆಗೆ ತಕ್ಕಂತೆ ಸ್ಪಂದಿಸುವ ಮನೋಭಾವ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ತನ್ನ ಐದು ಮಕ್ಕಳನ್ನು ಗಂಗಾ ನದಿಗೆಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ಅಮಾನವೀಯ ಘಟನೆ ರಾಜ್ಯದಲ್ಲೂ ನಡೆಯುವ ದಿನ ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಹಾರೂನ್ ವ್ಯಾಪಾರ ವಹಿವಾಟುಗಳಿಲ್ಲದೇ ಇರುವ ಮದ್ಯಮ ವರ್ಗದ ಜನರು ನೀಡುವ ಮನೆ ಹಾಗೂ ಅಂಗಡಿ ಬಾಡಿಗೆ ವಿಚಾರದಲ್ಲಿ ಮೂರು ತಿಂಗಳು ವಿನಾಯತಿ ನೀಡುವ ಬಗ್ಗೆ ಕೂಡಾ ಸರಕಾರ ಸ್ಪಷ್ಟ ತೀರ್ಮಾನಕ್ಕೆ ತಕ್ಷಣ ಬರಬೇಕಾಗಿದೆ ಎಂದವರು ಆಗ್ರಹಿಸಿದ್ದಾರೆ.
Arun Rasheed well done sir
ReplyDeleteGOD WILL BLESH U