ಮಂಗಳೂರು (ಕರಾವಳಿ ಟೈಮ್ಸ್) : ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಣ್ಣೂರು ಗ್ರಾಮ ವ್ಯಾಪ್ತಿಯ ಪಡೀಲ್ ಬಳಿ ಇರುವ ಖಾಸಗಿ ಆರೋಗ್ಯ ಕೇಂದ್ರವಾದ ಫಸ್ಟ್ ನ್ಯೂರೋ ಆಸ್ಪತ್ರೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಮೇಲ್ವಿಚಾರಣೆಯ ಐಸೋಲೇಷನ್ ಕೇಂದ್ರವಾಗಿ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೊರಡಿಸಿರುವ ಅಧಿಸೂಚನೆಯಲ್ಲಿ ಆಸ್ಪತ್ರೆಯನ್ನು ಪ್ರತ್ಯೇಕತಾ ಕೇಂದ್ರ (ಐಸೋಲೇಷನ್ ಸೆಂಟರ್) ಎಂದು ಪರಿಗಣಿಸಲಾಗಿದೆ. ಕೋವಿಡ್ ಇಡೀ ಕರ್ನಾಟಕ ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ ಮತ್ತು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಡಬ್ಲ್ಯುಎಚ್‍ಒ ಮಾರ್ಗಸೂಚಿಗಳ ಪ್ರಕಾರ ಸರಿಯಾದ ಮತ್ತು ಚಿಕಿತ್ಸೆಯನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗೆ ಅನ್ವಯ ಪರಿಣಾಮಕಾರಿ ಯೋಜನೆಯನ್ನು ರೂಪಿಸುವುದು ಅವಶ್ಯಕ. ರೋಗದ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಕೋವಿಡ್ ಯೋಜನೆಯ ಪ್ರಕಾರ ವಿವಿಧ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಅದರಂತೆ ಖಾಸಗಿ ಆರೋಗ್ಯ ಕೇಂದ್ರವಾದ ಫಸ್ಟ್ ನ್ಯೂರೋ ಆಸ್ಪತ್ರೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮೇಲ್ವಿಚಾರಣೆಯ ಪ್ರತ್ಯೇಕತಾ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಡಾ. ರಾಜೇಶ್ ಶೆಟ್ಟಿ ಅವರನ್ನು ನೋಡಲ್ ವೈದ್ಯಕೀಯ ಅಧಿಕಾರಿಯನ್ನಾಗಿ ನೇಮಕ ಮಾಡಿದೆ.
ಕೊರೋನಾ ವೈರಸ್ ಪಾಸಿಟಿವ್ ರೋಗಿ ಸಂಖ್ಯೆ 432 ಅನ್ನು ಈ ಮೊದಲು ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಸುತ್ತಲಿನ ಎಲ್ಲಾ ಗಡಿಗಳನ್ನು ಈಗ ಕೊರೋನಾ ಪೀಡಿತ ಪ್ರದೇಶ ಎಂದು ಪರಿಗಣಿಸಲಾಗುತ್ತದೆ ಮತ್ತು ಕಟ್ಟುನಿಟ್ಟಾದ ಲಾಕ್‍ಡೌನ್ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಈ ಕಂಟೈನ್ಮೆಂಟ್ ವಲಯದ ವ್ಯಾಪ್ತಿ ಹೀಗಿದೆ : ಪೂರ್ವದಲ್ಲಿ ಕನ್ನಡಿಗುಡ್ಡೆ, ಎಂಸಿಸಿ ರಸ್ತೆ, ಪಶ್ಚಿಮದಲ್ಲಿ ರಾಮನಾಥ ಕೃಪಾ ರೈಸ್ ಮಿಲ್, ಉತ್ತರದಲ್ಲಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73 ಮತ್ತು ದಕ್ಷಿಣದಲ್ಲಿ ಸರಕಾರಿ ಗಟಾರ, ಈ ವಲಯದಲ್ಲಿ ಎರಡು ಮನೆಗಳು, ಐದು ಅಂಗಡಿಗಳಿದ್ದು ಪ್ರದೇಶದ ಒಟ್ಟು ಜನಸಂಖ್ಯೆ 16.
ಇದಲ್ಲದೆ ಕಂಟೈನ್‍ಮೆಂಟ್ ವಲಯದ ಸುತ್ತ ಐದು ಕಿ.ಮೀ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಗುರುತಿಸಲಾಗಿದೆ. ಬಫರ್ ವಲಯವನ್ನು ಕಟ್ಟುನಿಟ್ಟಾದ ಸೀಲ್‍ಡೌನ್ ನಿಯಮಗಳೊಂದಿಗೆ ಗುರುತಿಸಲಾಗಿದೆ. ಇದರ ವ್ಯಾಪ್ತಿ ಹೀಗೆ ಬರಲಿದೆ : ಪೂರ್ವದಲ್ಲಿ ಕಲ್ಲಾಪು, ಪಶ್ಚಿಮದಲ್ಲಿ ಕುಡುಪು, ಉತ್ತರದಲ್ಲಿ ಫರಂಗಿಪೇಟೆ ಮತ್ತು ದಕ್ಷಿಣದಲ್ಲಿ ಫಳ್ನೀರ್ ಇರಲಿದೆ. ಈ ವ್ಯಾಪ್ತಿಯಲ್ಲಿ 41,900 ಮನೆಗಳು, 1,808 ಅಂಗಡಿಗಳು ಒಟ್ಟು 1,82,500 ಜನಸಂಖ್ಯೆ ಇದೆ.
ಕೋವಿಡ್-19 ವೈರಸ್ ನಿಯಂತ್ರಣ ಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಮಂಗಳೂರು ತಾಲೂಕಿನ ತಹಶೀಲ್ದಾರ್ ಮತ್ತು ತಾಲೂಕು ಮ್ಯಾಜಿಸ್ಟ್ರೇಟ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ನೇಮಕ ಮಾಡಲಾಗಿದೆ, ಅವರು ಈ ಪ್ರದೇಶದ ಒಟ್ಟಾರೆ ಉಸ್ತುವಾರಿ ವಹಿಸಲಿದ್ದಾರೆ ಎಂದು ಡೀಸಿ ಅಧಿಸೂಚನೆ ತಿಳಿಸಿದೆ.
0 comments:
Post a Comment