ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಪಂಜಿಕಲ್ಲು ಗ್ರಾಮದ ಪರ್ಲೊಟ್ಟು ನಿವಾಸಿ, ಮಾಜಿ ಸೈನಿಕ ರಿಚರ್ಡ್ ಫೆರ್ನಾಂಡಿಸ್ (55) ಅವರು ತಮ್ಮ ಮನೆಯಲ್ಲಿ ಕಳೆದ ಶುಕ್ರವಾರ ರಾತ್ರಿ ಮಲಗಿದಲ್ಲೇ ಮೃತಪಟ್ಟಿದ್ದು, ಐದು ದಿನಗಳ ಬಳಿಕ ಬುಧವಾರ ನೆರೆಮನೆಯವರು ವಿಚಾರಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಅವಿವಾಹಿತರಾಗಿದ್ದ ರಿಚರ್ಡ್ ಫೆರ್ನಾಂಡಿಸ್ ತನ್ನ ಇಬ್ಬರು ಅವಿವಾಹಿತ ಸಹೋದರಿಯರ ಜೊತೆ ವಾಸವಾಗಿದ್ದರು. ತನ್ನೊಂದಿಗಿದ್ದ ಇಬ್ಬರು ಸಹೋದರಿಯರೂ ಕೂಡಾ ಮಾನಸಿಕ ಅಸ್ವಸ್ಥರಾಗಿದ್ದು, ಸಹೋದರ ಮಲಗಿದಲ್ಲಿ ಮೃತಪಟ್ಟ ವಿಚಾರ ಇಬ್ಬರಿಗೂ ಗೊತ್ತಾಗಲೇ ಇಲ್ಲ. ನಿತ್ಯ ಸಮೀಪದ ಹಾಲಿನ ಡೈರಿಗೆ ಹಾಲು ಕೊಂಡು ಹೋಗುತ್ತಿದ್ದ ರಿಚರ್ಡ್ ಫೆರ್ನಾಂಡಿಸ್ ಶುಕ್ರವಾರದ ಬಳಿಕ ಡೈರಿಗೆ ತೆರಳುವುದು ಕಂಡುಬರದ ಹಿನ್ನಲೆಯಲ್ಲಿ ನೆರೆಕರೆಯವರು ಈ ಬಗ್ಗೆ ಸಹೋದರಿಯರಲ್ಲಿ ವಿಚಾರಿಸಿದ್ದಾರೆ. ಈ ಸಂದರ್ಭ ಸಹೋದರಿಯರು ಅವರು ಮಲಗಿದ್ದಾರೆ ಎಂದು ಉತ್ತರಿಸಿದ ಹಿನ್ನಲೆಯಲ್ಲಿ ನೆರೆಕರೆಯವರು ಮನೆಯೊಳಗೆ ಪ್ರವೇಶಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಕೋಣೆಯಲ್ಲಿ ರಿಚರ್ಡ್ ಫೆರ್ನಾಂಡಿಸ್ ಮಲಗಿದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿ ವಾಸನೆ ಬೀರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇವರು ಮೃತಪಟ್ಟಿರುವುದು ಮಾನಸಿಕ ಅಸ್ವಸ್ಥರಾಗಿದ್ದ ಸಹೋದರಿಯರ ಗಮನಕ್ಕೆ ಬರಲಿಲ್ಲ ಎನ್ನಲಾಗಿದೆ. ಮಾಜಿ ಸೈನಿಕ ಮೃತಪಟ್ಟು ಸುಮಾರು ಐದು ದಿನ ಕಳೆದಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment