ದಾನ ನೀಡುವ ಸಂದರ್ಭ ಸ್ವಾರ್ಥ ಪ್ರತಿಷ್ಠೆಗಳನ್ನು ಬದಿಗಿಡಿ... ಚಂದಾ ಎತ್ತಿದ ನಿಧಿಯಲ್ಲಿ ತನ್ನದೆಂಬ ಹುಂಬತನ ಬೇಡ...... ಅಲ್ಲಾಹನ ಸಂಪ್ರೀತಿ ಮಾತ್ರ ಉದ್ದೇಶವಾಗಿರಲಿ......ದಾನ-ಧರ್ಮದ ಹೆಸರಿನಲ್ಲಿ ಬಡವನ ಸ್ಥಾನ-ಮಾನ, ಅಭಿಮಾನ-ಗೌರವ ಹರಾಜಾಗದಿರಲಿ.... ಇದುವೇ ಕರಾವಳಿ ಟೈಮ್ಸ್ ಆಶಯ
ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರಕಾರ ದೇಶಾದ್ಯಂತ ಲಾಕ್‍ಡೌನ್ ಹೇರಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸ್ಥಿತಿವಂತರು ಸ್ವಯಂ ದಾನ-ಧರ್ಮಗಳನ್ನು ಬಡ-ಬಗ್ಗರಿಗೆ ನೀಡುತ್ತಿದ್ದರೆ, ಸಾಮಾಜಿಕ ಸಂಘಟನೆಗಳು ಹಾಗೂ ಮಸೀದಿ, ಮೊಹಲ್ಲಾ ಜಮಾಅತ್ ಸಮಿತಿಗಳು ತಮ್ಮ ಸಂಘಟನೆಗಳ ನಿಧಿಯಿಂದ ಜಮಾಅತ್ ವ್ಯಾಪ್ತಿಯಲ್ಲೂ, ಊರಿನ ಪರಿಸರದಲ್ಲೂ ಅದನ್ನು ಮೀರಿದ ವ್ಯಾಪ್ತಿಯಲ್ಲೂ ಬಡ-ಬಗ್ಗರಿಗೆ ಹಾಗೂ ಅನಿವಾರ್ಯತೆ ಇರುವ ಅರ್ಹರಿಗೆ ರೇಶನ್ ಸಾಮಾಗ್ರಿ ಅಥವಾ ನಗದು ರೂಪದಲ್ಲಿ ದಾನಗಳನ್ನು ಕಳೆದೆರಡು ವಾರಗಳಿಂದ ನಿರಂತರವಾಗಿ ನೀಡುತ್ತಿರುವುದು ಕಂಡು ಬರುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚಿನ ಉತ್ತಮ ರೀತಿಯಲ್ಲಿ ಈ ನೆರವು ಸಾಗುತ್ತಿರುವುದು ಅತ್ಯಂತ ಉತ್ತಮ ಬೆಳವಣಿಗೆಯಾಗಿ ಕಂಡು ಬರುತ್ತಿದೆ. ಮುಸ್ಲಿಂ ಸಮುದಾಯದ ಮಂದಿಗಳು ಸ್ವಸಮುದಾಯವನ್ನು ಹೊರತುಪಡಿಸಿ ಸಹೋದರ ಧರ್ಮೀಯರ ಬಂಧುಗಳಿಗೆ ಈ ಸೇವೆ, ನೆರವು ಕಾರ್ಯಗಳನ್ನು ವಿಸ್ತರಿಸಿಕೊಂಡು ನಡೆಸಿಕೊಂಡು ಬರುತ್ತಿರುವುದು ಇನ್ನಷ್ಟು ಉತ್ತಮ ಬೆಳವಣಿಗೆಯಾಗಿದೆ.
ಸಾಂಘಿಕವಾಗಿ ಕಾರ್ಯಚಟುಚಟಿಕೆಗಳನ್ನು ಕೈಗೊಳ್ಳುವಾಗ ಅಧ್ಯಕ್ಷ-ಕಾರ್ಯದರ್ಶಿ, ಉಪಾಧ್ಯಕ್ಷ ಎಂಬ ಹುದ್ದೆಯಡಿ ಇರುವ ವ್ಯಕ್ತಿಗಳು ತಾವೇನೋ ಮಹಾಸಾಧನೆ ಮಾಡುತ್ತೇವೆ ಎಂಬ ಹುಂಬತನ ಪ್ರದರ್ಶಿಸಿಸದೆ ಸಮಾಜ ಜೀವಿಯಾಗಿ ಈ ಸಮಾಜದ ಶೋಷಿತರ-ದಮನಿತರ ಪರವಾಗಿ ನಾನು ಸಲ್ಲಿಸುವ ಅಳಿಲ ಸೇವೆ ಎಂದು ಮಾತ್ರ ಎಣಿಸಿಕೊಂಡು ಅದಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಎಲ್ಲವೂ ಸರ್ವಶಕ್ತನ ಸಂಪ್ರೀತಿಗೆ ಎಂಬ ಅತ್ಯಂತ ವಿನಮ್ರ ಮನೋಭಾವದಿಂದ ಕಾರ್ಯವೆಸಗಿದಾಗ ಮಾತ್ರ ಇಂತಹ ಸೇವೆಗಳು ಅಲ್ಲಾಹನ ಬಳಿ ಪುಣ್ಯಾರ್ಹವಾಗಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ಮನನ ಮಾಡಿಕೊಳ್ಳಲೇಬೇಕಾಗಿದೆ. ಸಾಮಾಜಿಕ ಸಂಘಟನೆಗಳು ಸಂಗ್ರಹಿಸುವ ದೇಣಿಗೆ-ಚಂದಾಗಳು ಗರಿಷ್ಠ ಮಟ್ಟದಲ್ಲಿ ಅತ್ಯಂತ ಜಾಗರೂಕತೆಯಿಂದ ಸಮಾಜಕ್ಕೆ ಮರಳಿ ದೊರೆಯುವಂತಾಗಬೇಕು.
ವಿಶ್ವವೇ ಅತ್ಯಂತ ಸಂಕಷ್ಟ ಹಾಗೂ ಸಂಧಿಗ್ಧ ಪರಿಸ್ಥಿಯಲ್ಲಿ ದಿನಗಳೆಯುತ್ತಿದೆ. ಬಡವ-ಬಲ್ಲಿದ, ಮೇಲು-ಕೀಳು, ಬಿಳಿಯ-ಕರಿಯ, ಜಾತಿ-ಧರ್ಮ, ವರ್ಗ ಯಾವುದೂ ಇಂದು ಮನುಷ್ಯನ ನಡುವೆ ಸ್ಥಾನ ಪಡೆದಿಲ್ಲ. ಮಾನವೀಯತೆ ಮಾತ್ರ ಈ ಲೋಕದಲ್ಲಿ ಮೌಲ್ಯವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತಿರುವ ಸಮಯ ಬಂದೊದಗಿದೆ. ಹೀಗುರುತ್ತಾ ಸಂಕಷ್ಟದ ಸಮಯದಲ್ಲಿ ಜನರ ಕಷ್ಟಗಳನ್ನು ಅರ್ಥೈಸಿ ಭಗವಂತನ ಕರುಣೆ ಹಾಗೂ ಪಾರತ್ರಿಕ ಮೋಕ್ಷವನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಅಂತರಾಳದಿಂದ ದಾನ-ಧರ್ಮ, ಸತ್ಕರ್ಮಗಳನ್ನು ಕೈಗೊಳ್ಳುವ ಮೂಲಕ ಅಲ್ಲಾಹನ ಸಂಪ್ರೀತಿ ಸಂಪಾದಿಸುವ ಅತ್ಯಂತ ಮಹತ್ವದ ಸಂದರ್ಭ ಸ್ಥಿತಿವಂತರ ಮುಂದಿದೆ.
ಯಾವುದೇ ಕಾರಣಕ್ಕೂ ದಾನ ನೀಡಿದವರು ಹಾಗೂ ಅದನ್ನು ಅರ್ಹರಿಗೆ ತಲುಪಿಸುವವರ ಮನಸ್ಸಿನಲ್ಲಿ ತಾನೊಂದು ಮಹಾ ವ್ಯಕ್ತಿತ್ವ ಎಂಬ ಕನಿಷ್ಠ ಅಹಂ ಕೂಡಾ ಬಾರದಂತೆ ನೋಡಿಕೊಳ್ಳಬೇಕಿದೆ. ಅಲ್ಲಾಹನ ಮಾರ್ಗದಲ್ಲಿ ಮಾಡುವ ಧರ್ಮಯುದ್ದದ ಸಂದರ್ಭದಲ್ಲು ಕೂಡಾ ಎದುರಾಳಿ ಶತ್ರುಗಳನ್ನು ವಧಿಸುವ ಸಂದರ್ಭ ಆತನ ಮೇಲಿರುವ ವೈಯುಕ್ತಿಕ ದ್ವೇಷ ಮನಸ್ಸಿನಲ್ಲಿ ಮೈದಳೆದರೆ ಆತ ಮಾಡುವ ಜಿಹಾದ್ ಶೂನ್ಯ ಫಲವನ್ನಷ್ಟೇ ನೀಡಬಲ್ಲುದು. ಆ ಧರ್ಮಯುದ್ದಲ್ಲಿ ಆತ ಎದುರಾಳಿಯನ್ನು ಕೊಂದರೆ ಅನ್ಯಾಯವಾಗಿ ಕೊಂದ ಪಾಪವೂ, ಅಥವಾ ತಾನೇ ಶತ್ರುವಿನ ಕೈಯಿಂದ ವಧಿಸಲ್ಪಟ್ಟರೆ ಅದು ಸ್ವಾರ್ಥಕ್ಕಾಗಿ ಜೀವತೆತ್ತ ಪಾಪವೂ ಆತನ ಪಾಲಿಗೆ ಬಂದೊದಗಲಿದೆ ಎಂಬ ಪ್ರವಾದಿ ನುಡಿಗೆ ಅಡಿ ಗೆರೆ ಎಳೆದು ಇಂತಹ ಸತ್ಕರ್ಮಗಳಲ್ಲಿ ಯಾವುದೇ ಕಾರಣಕ್ಕೂ ವೈಯುಕ್ತಿಕ ಸ್ವಾರ್ಥ ಮನಸ್ಸಿನಲ್ಲಿ ಪುಟಿದೇಳದೆ ಆಡುವ ಮಾತಿನ ಪ್ರತಿಯೊಂದು ಪದವೂ ಅದು ಸಮಾಜಕ್ಕೆ, ಸಮುದಾಯದ ಹಿತಕ್ಕಾಗಿ ಎಂಬ ಏಕೈಕ ನಿಯ್ಯತ್‍ನೊಂದಿಗೆ ಸತ್ಕರ್ಮ ಮುಂದೆ ಸಾಗಲಿ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಲೇಬೇಕಾಗಿದೆ.
ಅದೆಷ್ಟೋ ನಿಷ್ಕಳಂಕ ಮನಸ್ಸಿನ ಬಂಧು-ಭಗಿಣಿಯರು ಈ ಒಂದು ಕಾರ್ಯಕ್ಕಾಗಿ ಅತ್ಯಂತ ರಹಸ್ಯವಾಗಿ ಸ್ವದಖಾ ನೀಡಿದ್ದಾರೆ, ನೀಡುತ್ತಿದ್ದಾರೆ. ಅಂತಹ ಮನಸ್ಸುಗಳ ಉದ್ದೇಶಕ್ಕೆ ಒಂದಿಷ್ಟೂ ಚ್ಯುತಿ ಬಾರದ ರೀತಿಯಲ್ಲಿ ಸ್ವಯಂ ಸೇವಕರಾಗಿ ದುಡಿಯುವ ಮಂದಿ ಜಾಗರೂಕರಾಗಿರಬೇಕಾಗಿದೆ. ಕಾರಣ ಅತ್ಯಂತ ಮಹತ್ವದ ಕಾರ್ಯವನ್ನು ಮಾಡುವ ಸಂದರ್ಭ ಮನಸ್ಸಿನಂತರಾಳದಲ್ಲಿ ಸ್ವಲ್ಪ ಮಟ್ಟಿನ ನಿಯ್ಯತ್ (ಸಂಕಲ್ಪ)ನಲ್ಲಿ ಏರು-ಪೇರುಂಟಾದರೂ ತುಂಬಲಾರದ ನಷ್ಟ ಇಹ-ಪರಗಳೆರಡಲ್ಲೂ ಖಂಡಿತ ಎಂಬುದನ್ನು ಮತ್ತೊಮ್ಮೆ ನೆನಪಿಸಲೇಬೇಕಾಗಿದೆ.
ದಾನ-ಧರ್ಮ, ಸೇವೆಗಳ ಹೆಸರಿನಲ್ಲಿ ಬಡ-ಬಗ್ಗರ, ನಿರ್ಗತಿಕರ ಮಜ್‍ಬೂರಿ ಪರಿಸ್ಥಿತಿ ದುರ್ಬಳಕೆಯಾಗದಿರಲಿ. ಅವರ ಮೌಲ್ಯಯುತ, ಗೌರವಾನ್ವಿತ ಸ್ಥಾನ-ಮಾನಗಳು ಯಾವುದೇ ಕಾರಣಕ್ಕೂ ಹರಾಜಾಗದಿರಲಿ. ಪ್ರವಾದಿ ನುಡಿಯಂತೆ ಕೊಟ್ಟದ್ದು ಬೆಟ್ಟದಷ್ಟಿರಲಿ, ಅಥವಾ ಕನಿಷ್ಠ ಬೊಗಸೆಯಷ್ಟೇ ಆಗಿರಲಿ. ಕೈಲಾದುದನ್ನು ಉತ್ತಮ ಸಂಕಲ್ಪದೊಂದಿಗೆ ನೀಡಿದರೆ ಅದನ್ನು ಅಲ್ಲಾಹು ಸ್ವೀಕರಿಸಿದರೆ ಎರಡು ಲೋಕದಲ್ಲಿರುವ ಸಕಲ ವಸ್ತುಗಳಿಗಿಂತಲೂ ಪರಮಶ್ರೇಷ್ಠ ಎಂಬುದನ್ನು ಮನಗಂಡು ಸಾಧ್ಯವಾದಷ್ಟು ಮಟ್ಟಿಗೆ ಎಲ್ಲವೂ ರಹಸ್ಯವಾಗಿರಲಿ. ಲೌಕಿಕ ಹೆಸರು, ಪ್ರತಿಷ್ಠೆಗಳೇನಿದ್ದರೂ ಅದೆಲ್ಲವೂ ಕೇವಲ ಕ್ಷಣಿಕ ಎಂಬುದನ್ನು ಮನಸಾರೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಲೋಕಾವಸಾನದ ಕುರುಹುಗಳ ಪೈಕಿ ಬಹುತೇಕ ಈಗಾಗಲೇ ಬಟಾ ಬಯಲಾಗಿರುವ ಸನ್ನಿವೇಶದಲ್ಲಿ ಇನ್ನಾದರೂ ಲೌಕಿಕ ಮೋಹ, ಆಡಂಬರ, ಪ್ರಶಸ್ತಿ, ಪ್ರತಿಷ್ಠೆಗಳನ್ನು ಬದಿಗಿಟ್ಟು ಮಾಡುವುದೆಲ್ಲವೂ ಸರ್ವಶಕ್ತನ ಸಂಪ್ರೀತಿಗಾಗಿ ಎಂಬ ಏಕ ಉದ್ದೇಶ ಮನಸ್ಸಿನಲ್ಲಿ ಪ್ರಜ್ವಲಿಸಲಿ ಎಂಬ ಅತ್ಯಂತ ಕಳಕಳಿಯ ವಿನಂತಿಯೊಂದಿಗೆ, ಸರ್ವಶಕ್ತನು ಎಲ್ಲರಿಗೂ ಸನ್ಮಸ್ಸು ಕರುಣಿಸಲಿ..... ಎಂದು ಕರಾವಳಿ ಟೈಮ್ಸ್ ಪತ್ರಿಕಾ ಬಳಗ ಈ ಸಂದರ್ಭ ಹಾರೈಸುತ್ತಿದೆ.
0 comments:
Post a Comment