ಬೆಂಗಳೂರು (ಕರಾವಳಿ ಟೈಮ್ಸ್) : ಎಪ್ರಿಲ್ 5 ರಂದು ರಾತ್ರಿ ದೀಪ ಆರಿಸಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಐಕ್ಯತೆ ಪ್ರದರ್ಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ವಾಗತಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಪ್ರಧಾನಿಗಳು, ಆರೋಗ್ಯ ಕಾರ್ಯಕರ್ತರ ಬಗ್ಗೆ ಐಕ್ಯತೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಜನರಿಗೆ ಪ್ರೇರಣೆ ನೀಡಲು ಪ್ರಧಾನಿಯವರ ಆಲೋಚನೆಯನ್ನು ನಾನು ಸ್ವಾಗತಿಸುತ್ತೇನೆ. ಇದರ ಜೊತೆಗೆ ಕೋವಿಡ್-19 ಸೋಂಕು ಪರೀಕ್ಷಿಸುವ ಕಿಟ್‍ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸುವ ಅವಶ್ಯಕತೆ ಇದೆ. ಈ ರೀತಿ ಹೆಚ್ಚಿನ ಕಿಟ್‍ಗಳನ್ನು ಒದಗಿಸಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿರುವ ಜನದಟ್ಟಣೆಯನ್ನು ಕಡಿಮೆ ಮಾಡಬಹುದು ಎಂದು ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ದಿನದ ಕೂಲಿಗಾಗಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ಉಳಿತಾಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕೆಲವರು ತಮ್ಮ ಉಳಿವಿಗಾಗಿ ಅಗತ್ಯವಾದ ವಸ್ತುಗಳನ್ನು ಸಹ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯ ಬಗ್ಗೆ ತಾವು ಅತ್ಯಂತ ತುರ್ತಾಗಿ ಕ್ರಮಕೈಗೊಳ್ಳಬೇಕು ಎಂದು ದೇವೇಗೌಡ ಹೇಳಿದ್ದಾರೆ.
ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ಕೃಷಿ ಉತ್ಪನ್ನಗಳಿಗೆ, ವಿಶೇಷವಾಗಿ ಬೇಗನೆ ನಶಿಸಬಹುದಾದ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಇಲ್ಲದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ನಾವು ಈ ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಸುದೀರ್ಘ ಯುದ್ಧವನ್ನು ಮಾಡಬಹುದು ಎಂದು ಮಾಜಿ ಪ್ರಧಾನಿಗಳು ಹಾಲಿ ಪ್ರಧಾನಿಗೆ ಸಲಹೆ ನೀಡಿದ್ದಾರೆ.
0 comments:
Post a Comment