ಮಂಗಳೂರು (ಕರಾವಳಿ ಟೈಮ್ಸ್) : ಕೊರೋನಾ ಹರಡಲು ಮುಸ್ಲಿಮರು ಕಾರಣ ಎಂಬ ಕಾಲ್ಪನಿಕ ವಾದವನ್ನು ಮುಂದಿಟ್ಟು ನಾಡಿನಾದ್ಯಂತ ಮುಸ್ಲಿಮರ ವಿರುದ್ದ ದ್ವೇಷ ಹರಡುವ, ಗ್ರಾಮಗಳಿಗೆ ಪ್ರವೇಶ ನಿರಾಕರಿಸಿ ಸಾಮಾಜಿಕ ಬಹಿಷ್ಕಾರ ಹಾಕುವ ಆತಂಕಕಾರಿ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಸರಕಾರ ತಕ್ಷಣ ಮಧ್ಯಪ್ರವೇಶಿಸಿ ಇಂತಹ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಡಿವೈಎಫ್‍ಐ ಆಗ್ರಹಿಸಿದೆ.
ದೆಹಲಿಯ ತಬ್ಲೀಗ್ ಜಮಾತ್ ಸಮಾವೇಶದಲ್ಲಿ ಕೊರೋನಾ ಹರಡಿರುವ ಪ್ರಕರಣವನ್ನು ಮುಂದಿಟ್ಟು ಕೊರೋನಾ ಹರಡಲು ಮುಸ್ಲಿಮರು ಕಾರಣ, “ಮುಸ್ಲಿಮರೇ ವ್ಯವಸ್ಥಿತವಾಗಿ ಕೊರೋನಾ ಹರಡಿಸುತ್ತಿದ್ದಾರೆ” ಎಂಬ ಪೂರ್ವಾಗ್ರಹಪೀಡಿತ, ಕಾಲ್ಪನಿಕ ಸುದ್ದಿಯನ್ನು ಕೆಲವೊಂದು ಮಾಧ್ಯಮಗಳ ಜೊತೆ ಸೇರಿ ಸಮಾಜದಲ್ಲಿ ವ್ಯವಸ್ಥಿತವಾಗಿ ಹರಡಲಾಗಿದೆ. ಈ ಮೂಲಕ ಭಾರತದ ಮುಸ್ಲಿಮರ ತಲೆಯ ಮೇಲೆ ಕೊರೋನ ಹೊಣೆಯನ್ನು ಏಕಪಕ್ಷೀಯವಾಗಿ ಹೊರಿಸಲಾಗಿದೆ. ಈ ರೀತಿಯ ಸುದ್ದಿ ಸೃಷ್ಟಿ, ಹರಡುವಿಕೆಯ ಹಿಂದೆ ಬಲಪಂಥೀಯ ಶಕ್ತಿಗಳ ಸಕ್ರಿಯ ಪಾತ್ರ ಇದೆ. ಇಂತಹ ಸುಳ್ಳು ಸುದ್ದಿಗಳಿಂದ ಸಾರ್ವಜನಿಕರು ಭೀತಿಗೊಂಡಿದ್ದು, ನೆರೆಹೊರೆಯ ಮುಸ್ಲಿಮರನ್ನೂ ಅನುಮಾನದಿಂದ ನೋಡುವ ಸ್ಥಿತಿ ನಿರ್ಮಾಣಗೊಂಡಿದೆ. ಅದರ ಪರಿಣಾಮವಾಗಿ ಕರ್ನಾಟಕದ ಹಲವೆಡೆ ಮುಸ್ಲಿಂ ವ್ಯಾಪಾರಿಗಳನ್ನು ಗ್ರಾಮ ಪ್ರವೇಶಿಸದಂತೆ ತಡೆದ, ಹಲವು ಕಡೆ ಮುಸ್ಲಿಮರನ್ನು ಬೀದಿಯಲ್ಲಿ ತಡೆದು ನಿಲ್ಲಿಸಿದ ಗುಂಪು ಅನ್ಯಾಯದ ಘಟನೆಗಳು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಮುಸ್ಲಿಮರ ವಿರುದ್ದ ಎಗ್ಗಿಲ್ಲದೆ ದ್ವೇಷದ ಮಾತುಗಳನ್ನು ಆಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮುಸ್ಲಿಮರಿಗೆ ಪ್ರವೇಶ ನಿರಾಕರಿಸುವ, ವ್ಯಾಪಾರ ಬಹಿಷ್ಕಾರದ ಪೆÇೀಸ್ಟರ್‍ಗಳನ್ನು ಆಯಕಟ್ಟಿನ ಜಾಗಗಳಲ್ಲಿ ಅಂಟಿಸಲಾಗಿದೆ. ಇದು ಸಾಂಕ್ರಾಮಿಕ ಸೋಂಕಿನಂತೆ ಗ್ರಾಮಗಳಿಂದ ಗ್ರಾಮಕ್ಕೆ ಹಬ್ಬುತ್ತಿದೆ. ಇಂತಹ ಕೃತ್ಯಗಳ ಹಿಂದೆ ಖಚಿತವಾಗಿ ಬಲಪಂಥೀಯ ಕೋಮುರಾಜಕಾರಣ ಪಾತ್ರ ಇದೆ.
ಇಂತಹ ಕೃತ್ಯಗಳು ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯ, ಹತಾಷೆಗೆ ಕಾರಣವಾಗುತ್ತಿದೆ. ಅವರನ್ನು ಏಕಾಂಗಿಗೊಳಿಸಲಾಗುತ್ತಿದೆ. ಸಾಮಾಜಿಕ ಬಹಿಷ್ಕಾರದ ಇಂತಹ ಕೃತ್ಯಗಳು ಭವಿಷ್ಯದಲ್ಲಿ ಕರಾಳ ರೂಪಗಳನ್ನು ಪಡೆಯುವ ಸಾಧ್ಯತೆಗಳಿವೆ. ಸರಕಾರ ಇಂತಹ ಪ್ರಕ್ರಿಯೆಗಳನ್ನು ಅತಿ ಗಂಭೀರವಾಗಿ ಪರಿಗಣಿಸಬೇಕು. “ಮುಸಲ್ಮಾನ ಸಮುದಾಯದ ಮೇಲೆ ವಿನಾಕಾರಣ ಆರೋಪ ಹೊರಿಸುವುದನ್ನು ಸಹಿಸುವುದಿಲ್ಲ” ಎಂಬ ಮಾತಿಗೆ ಬದ್ಧರಾಗಿ ಮುಖ್ಯಮಂತ್ರಿಗಳು ಕಠಿಣ ಕ್ರಮಗಳನ್ನು ಜರುಗಿಸಬೇಕು, ಪೆÇಲೀಸರು ಇಂತಹ ಘಟನೆಗಳಲ್ಲಿ ಸಂತ್ರಸ್ತ ಸಮುದಾಯದಿಂದ ದೂರಿಗಾಗಿ ಕಾಯದೆ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‍ಐ ಆಗ್ರಹಿಸುತ್ತದೆ. ಜನ ಸಮೂಹವು ಸಮಾಜವನ್ನು ಇಬ್ಬಾಗಿಸುವ, ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುವ ಇಂತಹ ದ್ವೇಷಪೂರಿತ ಪ್ರಚಾರಗಳಿಗೆ ಬಲಿಬೀಳಬಾರದು, ಸುಳ್ಳು ಸುದ್ದಿಗಳನ್ನು ಖಚಿತ ಪಡಿಸದೆ ನಂಬಬಾರದು. ಸಾಮಾಜಿಕ ಐಕ್ಯತೆಯನ್ನು ಎತ್ತಿಹಿಡಿದು ಮತೀಯ ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ ಬಸವರಾಜ ಪೂಜಾರ್ ಮನವಿ ಮಾಡಿದ್ದಾರೆ.
0 comments:
Post a Comment