ಬಂಟ್ವಾಳ (ಕರಾವಳಿ ಟೈಮ್ಸ್) : ಕೋಮುವಾದ ವಿರೋಧಿ ಹೋರಾಟಗಾರ, ಸೌಹಾರ್ಧ-ಸಹಬಾಳ್ವೆಗಾಗಿ ನಿರಂತರ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳಲ್ಲಿ ನಿರಂತರ ಭಾಗಿಯಾಗುತ್ತಿದ್ದ ಭಜರಂಗದಳದ ಮಾಜಿ ಮುಖಂಡರಾಗಿದ್ದ ಮಹೆಂದ್ರಕುಮಾರ್ ಅವರ ನಿಧನಕ್ಕೆ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಈ ಬಗ್ಗೆ ಡಿವೈಎಫ್‍ಐ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ತುಳಸೀದಾಸ್ ವಿಟ್ಲ ಅವರು ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದು, ಇತ್ತೀಚೆಗೆ ಕೇಂದ್ರ ಸರಕಾರ ಜಾರಿ ಮಾಡಿದ ಪೌರತ್ವ ಕಾನೂನು ತಿದ್ದುಪಡಿ ವಿರುದ್ಧ ರಾಜ್ಯದ ಹಲವಾರು ಎನ್ ಆರ್ ಸಿ ವಿರೋಧಿ ಸಭೆಗಳಲ್ಲಿ ಅತ್ಯಂತ ಕಾಳಜಿ, ಮುತುವರ್ಜಿಯಿಂದ ಪಾಲ್ಗೊಳ್ಳುತ್ತಿದ್ದರು. ಎನ್ ಆರ್ ಸಿಯಿಂದ ಬಡ ಮತ್ತು ಅವಿದ್ಯಾವಂತ ಕಾರ್ಮಿಕರಿಗೆ ಹೇಗೆ ತೊಂದರೆಯಾಗುತ್ತದೆ ಎಂದು ಅವರು ಮನಮುಟ್ಟುವಂತೆ ವಿವರಿಸುತ್ತಿದ್ದರು. ಸೌಹಾರ್ದತೆಗಾಗಿ ತನ್ನದೇ ಆದ ‘ನಮ್ಮ ಧ್ವನಿ’ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಮಹೆಂದ್ರ ಕುಮಾರ್ ಅವರ ನಿಧನದಿಂದಾಗಿ ನಾಡಿನ ಕೋಮು ಸೌಹಾರ್ಧತೆಗೆ ಹಿನ್ನಡೆಯಾದಂತಾಗಿದೆ. ಸಂಘ ಪರಿವಾರದಲ್ಲಿದ್ದು ಪರಧರ್ಮ ದ್ವೇಷಿಯಾಗಿದ್ದ ಅವರು ಅನಂತರ ಅವರು ಅದರಿಂದ ಹೊರಬಂದು ಸ್ವಂತಿಕೆ ಬೆಳೆಸಿಕೊಂಡು, ಪ್ರಗತಿಪರವಾಗಿ ಚಿಂತಿಸುತ್ತ ಮನುಷ್ಯ ಪರವಾಗಿ ಯೋಚಿಸಲು ಆರಂಭಿಸಿದ್ದರು. ಪ್ರತಿ ಸಭೆಗಳಲ್ಲಿ ಅವರು ಸಂಘಪರಿವಾರದ ಕುತಂತ್ರಗಳನ್ನು ಸಮರ್ಥವಾಗಿ ಹೊರಗೆಡಹುತ್ತಿದ್ದರು. ಇಂತಹ ದಿಟ್ಟ ಹೋರಾಟಗಾರರನ್ನು ಕಳೆದುಕೊಂಡ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕನ್ನಡ ನಾಡಿಗೆ ಅಪಾರ ನಷ್ಟವಾಗಿದೆ. ಅವರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ದು:ಖ ಸಹಿಸುವ ಶಕ್ತಿ ಬರಲಿ. ಮಹೇಂದ್ರ ಕುಮಾರ್ ಅವರ ನಿಧನಕ್ಕೆ ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಸಮಿತಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ ಎಂದಿದ್ದಾರೆ.
0 comments:
Post a Comment