ಅಧಿಕಾರಿಗಳೊಂದಿಗೆ ಜಂಘೀ ಕುಸ್ತಿಗಿಳಿಯುವುದು ಬಿಟ್ಟು ಸ್ವಯಂ ಜವಾಬ್ದಾರಿ ಮೆರೆಯಬೇಕಾಗಿದೆ
ಕೊರೋನಾ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಜಾಗೃತಿಯ ಹೆಜ್ಜೆ ಇಡಬೇಕಾಗಿದೆ
ಕರಾವಳಿ ಟೈಮ್ಸ್ ಕಳಕಳಿ
ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನಲ್ಲಿ ಈಗಾಗಲೇ ಕೊರೋನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಇನ್ನಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಬಂಟ್ವಾಳ ಕೊರೋನಾ ಹಾಟ್‍ಸ್ಪಾಟ್ ಆಗಿ ಗುರುತಿಸಿಕೊಂಡಿದೆ.
ದೂರದ ಚೀನಾ, ಅಮೇರಿಕಾ, ಬ್ರಿಟನ್, ಲಂಡನ್, ಗಲ್ಫ್ ರಾಷ್ಟ್ರಗಳಲ್ಲಿ ಮಾತ್ರ ಕೊರೋನಾ ಭೀಕರತೆಯ ಬಗ್ಗೆ ಕಂಡು ಮರುಕಪಟ್ಟಿದ್ದ ನಮಗೆ ಬಳಿಕ ಇದು ಭಾರತ ದೇಶಕ್ಕೂ ವ್ಯಾಪಿಸಿದ ಬಳಿಕ ತೀವ್ರ ಆತಂಕ ಎದುರಾಗಿತ್ತು. ಆದರೆ ಇದೀಗ ನಮ್ಮ ಕಲಾಡಿಗೇ ಈ ವ್ಯಾಧಿ ಅಪಾಯಕಾರಿಯಾಗಿ ವ್ಯಾಪಿಸಿ ಬಂದಿದ್ದು, ಈಗಾಗಲೇ ತಾಲೂಕಿನ ಇಬ್ಬರು ಮಹಿಳೆಯರನ್ನು ಬಲಿ ಪಡೆದುಕೊಂಡಿದೆ. ಹಲವು ಕಡೆ ಸೀಲ್‍ಡೌನ್ ಕೂಡಾ ಆಗಿದೆ. ಈ ಒಂದು ಮಹಾಮಾರಿಯ ನಿಯಂತ್ರಣಕ್ಕಾಗಿ ಸರಕಾರ, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು ಸೇರಿದಂತೆ ಹಲವು ಮಂದಿ ಬೀದಿ ಬೀದಿಗಳಲ್ಲಿ ಜನರ ರಕ್ಷಣೆಗಾಗಿ ಆಹೋರಾತ್ರಿ ಶ್ರಮಪಡುತ್ತಿರುವುದನ್ನು ನಾವು ಕಾಣುತ್ತಲೇ ಇದ್ದೇವೆ.
ಈ ನಿಟ್ಟಿನಲ್ಲಿ ತಾಲೂಕಿನ ಜನ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸದೆ ಸಾಕಷ್ಟು ಗರಿಷ್ಠ ಪ್ರಮಾಣದಲ್ಲಿ ಮನೆಯಲ್ಲೇ ಲಾಕ್‍ಡೌನ್ ಆಗುವ ಮೂಲಕ ತಮ್ಮ ರಕ್ಷಣೆಯನ್ನು ತಾವುಗಳೇ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅತೀ ಅಗತ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬಂದು ಉದ್ದೇಶ ಈಡೇರಿದ ತಕ್ಷಣ ಮತ್ತೆ ಮನೆ ಸೇರಿಕೊಳ್ಳುವ ಮೂಲಕ ಸ್ವಯಂ ನಿಯಂತ್ರಣ ಸಾಧಿಸಬೇಕಾಗಿದೆ. ಅಪಾಯವನ್ನು ಆಹ್ವಾನಿಸುವುದಕ್ಕಿಂತ ಮುಂಚಿತವಾಗಿ ಜಾಗೃತೆ ವಹಿಸಿಕೊಂಡರೆ ತಮಗೂ, ಕುಟುಂಬಕ್ಕೂ, ಊರಿಗೂ, ತಾಲೂಕಿಗೂ, ಜಿಲ್ಲೆಗೂ, ರಾಜ್ಯಕ್ಕೂ, ದೇಶಕ್ಕೂ ಒಳಿತಾಗಲಿದೆ. ಕೊಂಚ ಯಾಮಾರಿದರೂ ಈ ಮಹಾಮಾರಿ ವೈರಸ್ ವ್ಯಾಪಕ ಹಾನಿಯನ್ನುಂಟುಮಾಡಲಿದೆ, ವ್ಯಕ್ತಿಯನ್ನು ಮಾತ್ರವಲ್ಲದೆ, ಕುಟುಂಬವನ್ನು ತಾಲೂಕು, ಜಿಲ್ಲೆ, ರಾಜ್ಯ, ದೇಶಕ್ಕೂ ಕಂಟಕವಾಗಲಿದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಲೇಬೇಕಾಗಿದೆ.
ಕೊರೊನಾ ಮಹಾ ವೈರಸ್ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹು ವಿಸ್ತರಿಸುತ್ತಿದ್ದರೂ ಕೆಲವರು ಅದರಲ್ಲೂ ಮುಖ್ಯವಾಗಿ ಯುವ ಸಮೂಹ ಅಧಿಕಾರಿಗಳ ಕಣ್ಣು ತಪ್ಪಿಸಿ ಅನಾವಶ್ಯಕ ತಿರುಗಾಟ ನಡೆಸುವುದು, ಮೈದಾನಗಳಲ್ಲಿ ಆಟ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮೊದಲಾದ ಕೃತ್ಯಗಳನ್ನು ಮಾಡುತ್ತಿರುವುದು ನಮ್ಮ ರಕ್ಷಣೆಯ ಹೊಣೆ ಹೊತ್ತಿರುವ ಅಧಿಕಾರಿ-ಸಿಬ್ಬಂದಿಗಳ ನಿದ್ದೆಗೆಡಿಸುತ್ತಿದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳ ಹಾಗೂ ಪೊಲೀಸರೊಂದಿಗೆ ತೊಡೆತಟ್ಟುವ ಸಮಯ ಇದಲ್ಲ. ನಮ್ಮ ರಕ್ಷಣೆಗಾಗಿ ಮಳೆ-ಬಿಸಿಲೆನ್ನದೆ ಆಹೋರಾತ್ರಿ ಶ್ರಮಿಸುತ್ತಿರುವ ಅಧಿಕಾರಿ-ಸಿಬ್ಬಂದಿಗಳೊಂದಿಗೆ ಸಹಕಾರ ಮನೋಭಾವ ತೋರಬೇಕಾದ ಸಮಯ ಇದಾಗಿದೆ. ಇದನ್ನು ಯುವಕರು ಅರ್ಥ ಮಾಡಿಕೊಂಡು ತಮ್ಮ ತಮ್ಮ ಮನೆಗಳಲ್ಲೇ ಸ್ಟೇ ಆಗಬೇಕಾಗಿದೆ. ನಮ್ಮೆಲ್ಲರ ರಕ್ಷಣೆಗಾಗಿ ಸರಕಾರ ಪೊಲೀಸರ ಹಾಗೂ ಇತರ ಇಲಾಖೆಯ ಅಧಿಕಾರಿಗಳ ಮೂಲಕ ಹೆದ್ದಾರಿ ಹಾಗೂ ಒಳ ರಸ್ತೆಗಳಲ್ಲಿ ಪ್ರತ್ಯೇಕ ಗೇಟ್, ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸುವ ಮೂಲಕ ಜನರ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕುವ ವ್ಯವಸ್ಥೆಯನ್ನು ಮಾಡಿದೆ. ಅದೇ ರೀತಿ ಜಿಲ್ಲಾ ಹಾಗೂ ರಾಜ್ಯ ಗಡಿ ಪ್ರದೇಶಗಳಲ್ಲಿ ವಿಶೇಷ ತಪಾಸಣಾ ಗೇಟ್‍ಗಳನ್ನು ನಿರ್ಮಿಸುವ ಮೂಲಕ ಬಿಗು ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದೆಲ್ಲವೂ ನಮ್ಮ ರಕ್ಷಣೆಗಾಗಿಯೇ ಹೊರತು ಇನ್ಯಾವುದೇ ಉದ್ದೇಶ ಇದರ ಹಿಂದೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಇಂತಹ ಗೇಟ್, ಚೆಕ್‍ಪೋಸ್ಟ್‍ಗಳನ್ನು ಯಾವುದೇ ಕಾರಣಕ್ಕೂ ಬ್ರೇಕ್ ಮಾಡದೆ ಜನ ಇದ್ದಲ್ಲೇ ಇರುವ ಮೂಲಕ ಸಹಕಾರ ನೀಡಬೇಕಾಗಿದೆ. ಸುಖಾ ಸುಮ್ಮನೆ ವಿವಿಧ ಕುಂಟು ನೆಪಗಳನ್ನು ಒಡ್ಡಿ ಅಧಿಕಾರಿಗಳನ್ನು ವಂಚಿಸಿದ ಮಾತ್ರಕ್ಕೆ ಯಾರೂ ದೊಡ್ಡ ಜನ ಆಗುವ ಪರಿಸ್ಥಿತಿ ಇದಲ್ಲ. ಅಧಿಕಾರಿಗಳನ್ನು ವಂಚಿಸುವುದು ಎಂದರೆ ಜನ ತಮಗೆ ತಾವೇ ವಂಚಿಸಿದಂತೆ ಎಂದು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ.
ಇನ್ನು ಮುಸ್ಲಿಂ ಬಾಂಧವರು ತಮ್ಮ ಪವಿತ್ರ ರಂಝಾನ್ ತಿಂಗಳಲ್ಲಿ ಯಾವುದೇ ಕಾರಣಕ್ಕೂ ತಮ್ಮ ಧರ್ಮಗುರುಗಳ ಆದೇಶಗಳನ್ನು ಧಿಕ್ಕರಿಸಿ ಸಾಮೂಹಿಕ ಪ್ರಾರ್ಥನೆಯಂತಹ ಅನಾವಶ್ಯಕ ಕಾರ್ಯಗಳಿಗೆ ಕೈ ಹಾಕದೆ ಸರಕಾರ ಹಾಗೂ ಧಾರ್ಮಿಕ ಪಂಡಿತರ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಬೇಕಾಗಿದೆ. ಮಸೀದಿಗಳನ್ನು ಮಾತ್ರ ಸಾಮೂಹಿಕ ಪ್ರಾರ್ಥನೆಗಳಿಂದ ಮುಕ್ತಿಗೊಳಿಸಿ ಇನ್ನು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ಮನೆಗಳಲ್ಲಿ ನೆರೆ-ಕರೆ, ಸಂಬಂಧಿಕರನ್ನು ಒಟ್ಟುಗೂಡಿಸಿ ಸಾಮೂಹಿಕ ಪ್ರಾರ್ಥನೆ ನಡೆಸುವಂತೆ ಕೃತ್ಯಗಳಿಗೂ ಕೈ ಹಾಕದೆ ಸಾಮಾಜಿಕ ಅಂತರ ಹಾಗೂ ವೈರಸ್ ನಿಯಂತ್ರಣಕ್ಕಿರುವ ಸಕಲ ಮಾರ್ಗಗಳನ್ನೂ ಪಾಲಿಸಬೇಕಾಗಿದೆ. ಸರಕಾರ ಹಾಗೂ ಧಾರ್ಮಿಕ ಪಂಡಿತರನ್ನು ವಂಚಿಸುವ ಯಾವುದೇ ಆರಾಧನಾ ಕರ್ಮಗಳೂ ಭಗವಂತನ ಬಳಿ ಸ್ವೀಕಾರ ಅಲ್ಲ ಎಂಬ ಸತ್ಯವನ್ನು ಮನಗಂಡು ಸಂದರ್ಭೋಚಿತವಾಗಿ ಸ್ಪಂದಿಸುವ ಮೂಲಕ ಬಾಂಧವರು ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕಾದ ಸಂದರ್ಭ ಇದಾಗಿದೆ. ಮಾನವ ರಾಶಿಯ ಅಸ್ತಿತ್ವ ಉಳಿದಾಗ ಮಾತ್ರ ಎಲ್ಲ ಆರಾಧನಾ ಕರ್ಮಗಳನ್ನೂ ನೆರವೇರಿಸಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ನಾವು ಮಾಡುವ ಅಚಾತುರ್ಯಗಳೇನಾದರೂ ಸಾಮೂಹಿಕ ಸಮಸ್ಯೆಗಳಿಗೆ ಕಾರಣವಾದರೆ ಅದರ ಹೊಣೆಯನ್ನು ನಾವೆಲ್ಲರೂ ಹೊರಬೇಕಾಗುತ್ತದೆ. ಹಾಗೂ ಇದರ ಗಂಭೀರ ಪರಿಣಾಮವನ್ನು ಸಮಸ್ತ ಮಾನವ ಸಮೂಹ ಅನುಭವಿಸಬೇಕಾಗುತ್ತದೆ ಎಂಬ ಸತ್ಯವನ್ನು ಎಲ್ಲರೂ ಮನನ ಮಾಡಿಕೊಳ್ಳಬೇಕಾಗಿದೆ.
ಈ ಎಲ್ಲಾ ಕ್ರಮಗಳನ್ನು ಪಾಲಿಸುವ ಮೂಲಕ ನಾವೆಲ್ಲರೂ ಸರಕಾರ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ನಮ್ಮಿಂದಾಗುವ ಎಲ್ಲ ಸಹಕಾರವನ್ನು ನೀಡಲೇಬೇಕಾಗಿದೆ. ಪ್ರತಿಯೊಬ್ಬರೂ ಸಂಧಿಗ್ಧ ಪರಿಸ್ಥಿತಿಯಲ್ಲಿ ಜವಾಬ್ದಾರಿ ಅರಿತು ಜಾಗರೂಕತೆಯ ಹೆಜ್ಜೆ ಇಡಬೇಕಾಗಿದೆ.
0 comments:
Post a Comment