ಬಂಟ್ವಾಳ (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಸಾವು ಪ್ರಕರಣ ಭಾನುವಾರ ಬೆಳಿಗ್ಗೆ ಸಂಭವಿಸಿದ್ದು, ಬಂಟ್ವಾಳ ಮುಖ್ಯ ಪೇಟೆಯ ರಥ ಬೀದಿ ನಿವಾಸಿ 50 ವರ್ಷ ಪ್ರಾಯದ ಮಹಿಳೆ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಪ್ರಕರಣ ವರದಿಯಾಗುತ್ತಿದ್ದಂತೆ ಮಹಿಳೆಯ ಸಂಪೂರ್ಣ ಕುಟುಂಬವನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬಂಟ್ವಾಳ ಪೇಟೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಬಂಟ್ವಾಳದ ಬಡ್ಡಕಟ್ಟೆ, ಜಕ್ರಿಬೆಟ್ಟು, ಬಂಟ್ವಾಳ ಪೇಟೆ, ಕೆಳಗಿನಪೇಟೆ, ಬಸ್ತಿಪಡ್ಪು ಸಹಿತ ಬಿ ಸಿ ರೋಡು ಮುಖ್ಯ ವೃತ್ತದವರೆಗೂ ಸೀಲ್ ಡೌನ್ ಘೋಷಿಸಲಾಗಿದೆ.
ಸೀಲ್ ಡೌನ್ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಜನ ಸಂಚಾರ ನಿಯಂತ್ರಿಸುವ ನಿಟ್ಟಿನಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪಿಎಸ್ಸೈಗಳಾದ ಅವಿನಾಶ್ ಹಾಗೂ ಪ್ರಸನ್ನ ಅವರ ಸೂಚನೆ ಮೇರೆಗೆ ಪುರಸಭಾ ಸಹಾಯಕ ಇಂಜಿನಿಯರ್ ಮುಹಮ್ಮದ್ ಇಕ್ಬಾಲ್ ನೇತೃತ್ವದಲ್ಲಿ ಪುರಸಭಾ ಪೌರ ಕಾರ್ಮಿಕರು ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಭಾನುವಾರ ತಡರಾತ್ರಿವರೆಗೂ ಕಾಮಗಾರಿ ನಡೆಸಿ ಮಣ್ಣು ಹಾಕಿ ಮುಚ್ಚಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡರೆ, ಕಂದಾಯ ಹಾಗೂ ಆರೋಗ್ಯ ಇಲಾಖಾಧಿಕಾರಿಗಳು ಹೈ ಅಲರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೃತ ಮಹಿಳೆಯ ಮೃತದೇಹವನ್ನು ಮಂಗಳೂರಿನ ಬೋಳಾರದ ಸ್ಮಶಾನದಲ್ಲಿ ಜಿಲ್ಲಾಡಳಿತದ ಮುಂದಾಳುತ್ವದಲ್ಲಿ ಅಂತ್ಯ ಕ್ರಿಯೆ ನಡೆಸಲಾಗಿದ್ದು, ಅವರ ಸಂಪೂರ್ಣ ಕುಟುಂಬಕ್ಕೆ ಕ್ವಾರಂಟೈನ್ ದಿಗ್ಬಂಧನ ವಿಧಿಸಲಾಗಿದೆ. ಬಂಟ್ವಾಳದ ಜನರನ್ನು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬಾರದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಸೂಚನೆ ನೀಡಿದ್ದು, ಸೂಚನೆ ಮೀರಿದರೆ ಪ್ರಕರಣ ದಾಖಲು ಮಾಡುವುದಲ್ಲದೆ ಕ್ವಾರಂಟೈನ್ ಗೆ ಕಳುಹಿಸಲಾಗುವುದು ಎಂದು ಎಚ್ವರಿಸಿದ್ದಾರೆ. ಒಟ್ಟಿನಲ್ಲಿ ಕಳೆದೆರಡು ವಾರಗಳಿಂದ ತಣ್ಣಗಾಗಿದ್ದ ಜಿಲ್ಲೆಯಲ್ಲಿ ಇದೀಗ ಮತ್ತೆ ಕೊರೋನಾ ಬಿಸಿ ತಾರಕಕ್ಕೇರಿದ್ದು, ಜನರ ಹಾಗೂ ಅಧಿಕಾರಗಳನ್ನು ನಿದ್ದೆಗೆಡುವಂತೆ ಮಾಡಿದೆ.
0 comments:
Post a Comment