ರಾಯ್ಪುರ್ (ಕರಾವಳಿ ಟೈಮ್ಸ್) : ಕೊರೊನಾ ವೈರಸ್ ವಿಶ್ವದಾದ್ಯಂತ ವ್ಯಾಪಿಸಿದ್ದು, ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಕೊರೊನಾ ಮತ್ತು ಕೋವಿಡ್ ಈ ಎರಡು ಪದಗಳು ಜನರಲ್ಲಿ ಈಗಾಗಲೇ ಆತಂಕ ಸೃಷ್ಟಿಸಿವೆ. ಅಲ್ಲದೇ ಇದರಿಂದ ಆರ್ಥಿಕ ಕಷ್ಟವನ್ನು ಎದುರಿಸಲಾಗುತ್ತಿದೆ. ಆದರೆ ಈ ಮಧ್ಯೆ ಛತ್ತೀಸ್‍ಗಢ ದಂಪತಿ ತಮಗೆ ಜನಿಸಿದ ಅವಳಿ ಮಕ್ಕಳಿಗೆ ‘ಕೊರೊನಾ’ ಮತ್ತು ‘ಕೋವಿಡ್’ ಎಂದು ನಾಮಕರಣ ಮಾಡಿದ್ದಾರೆ.
ರಾಯ್ಪುರ ಮೂಲದ ದಂಪತಿಗೆ ಮಾರ್ಚ್ 26-27ರ ಮಧ್ಯರಾತ್ರಿ ರಾಯ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳ ಜನನವಾಗಿದೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಜನಿಸಿದ್ದು, ಲಾಕ್‍ಡೌನ್ ಮಧ್ಯೆಯೂ ಜನಿಸಿದ್ದಕ್ಕಾಗಿ ಮಕ್ಕಳಿಗೆ ‘ಕೊರೊನಾ-ಕೋವಿಡ್’ ಎಂದು ಹೆಸರನ್ನು ಇಡಲಾಗಿದೆ.
ಮಾರ್ಚ್ 27 ರಂದು ಮುಂಜಾನೆ ನಾನು ಅವಳಿ ಮಕ್ಕಳಿಗೆ ಜನ್ಮ ನೀಡಿದೆ. ನಾವು ಗಂಡು ಮಗುವಿಗೆ ಕೋವಿಡ್ ಮತ್ತು ಹೆಣ್ಣು ಮಗುವಿಗೆ ಕೊರೊನಾ ಎಂದು ಹೆಸರಿಟ್ಟಿದ್ದೇವೆ. ಹೆರಿಗೆಯ ವೇಳೆ ನಾವು ಅನೇಕ ತೊಂದರೆಗಳನ್ನು ಎದುರಿಸಿದ್ದೇವೆ. ಆದ್ದರಿಂದ ನನ್ನ ಪತಿ ನೆನಪಿಗಾಗಿ ಈ ಹೆಸರು ಇಟ್ಟಿದ್ದಾರೆ ಎಂದು ತಾಯಿ ಪ್ರೀತಿ ವರ್ಮಾ ತಿಳಿಸಿದರು.
ಪ್ರಸ್ತುತ ಕೊರೊನಾ ವೈರಸ್ ಅಪಾಯಕಾರಿಯಾಗಿದೆ. ಆದರೆ ಇದೇ ವೇಳೆ ಜನರಿಗೆ ನೈರ್ಮಲ್ಯ, ಸ್ವಚ್ಛತೆ ಮತ್ತು ಇತರ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುವಂತೆ ಮಾಡಿದೆ. ಹೀಗಾಗಿ ನಾವು ಈ ಹೆಸರುಗಳ ಬಗ್ಗೆ ಯೋಚಿಸಿದ್ದೆವು. ಆಸ್ಪತ್ರೆಯ ಸಿಬ್ಬಂದಿ ಸಹ ‘ಕೊರೊನಾ ಮತ್ತು ಕೋವಿಡ್’ ಎಂದು ಕರೆಯುತ್ತಿದ್ದರು. ಕೊನೆಗೆ ಸಾಂಕ್ರಾಮಿಕ ರೋಗದ ಹೆಸರನ್ನು ಇಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಮಾರ್ಚ್ 26ರಂದು ತಡರಾತ್ರಿ ನನಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಪತಿ ಅಂಬುಲೆನ್ಸ್‌ಗೆ ಫೋನ್ ಮಾಡಿದ್ದಾರೆ. ಲಾಕ್‍ಡೌನ್ ಆದ ಪರಿಣಾಮ ಯಾವುದೇ ವಾಹನಕ್ಕೂ ಅವಕಾಶ ಇರಲಿಲ್ಲ. ಹೀಗಾಗಿ ಪೊಲೀಸರು ವಿವಿಧ ಸ್ಥಳಗಳಲ್ಲಿ ಅಂಬುಲೆನ್ಸ್ ನಿಲ್ಲಿಸಿ, ಪರಿಶೀಲನೆ ಮಾಡಿದ್ದಾರೆ. ಕೊನೆಗೆ ನನ್ನ ಸ್ಥಿತಿ ನೋಡಿ ಬಿಟ್ಟಿದ್ದಾರೆ. ಆದರೆ ಮಧ್ಯರಾತ್ರಿಯಾಗಿದ್ದರಿಂದ ಆಸ್ಪತ್ರೆಯಲ್ಲಿ ಏನಾಗಬಹುದು ಎಂಬ ಭಯ ಆಗಿತ್ತು. ಅದೃಷ್ಟವಶಾತ್ ವೈದ್ಯರು ಮತ್ತು ಇತರ ಸಿಬ್ಬಂದಿ ಆಸ್ಪತ್ರೆಯಲ್ಲೇ ಇದ್ದು ನನಗೆ ಹೆರಿಗೆ ಮಾಡಿಸಿದರು ಎಂದು ಹೆರಿಗೆ ವೇಳೆ ಎದುರಾದ ತೊಂದರೆಯ ಬಗ್ಗೆ ವರ್ಮಾ ತಿಳಿಸಿದ್ದಾರೆ.
ತಾಯಿ ಮತ್ತು ಮಕ್ಕಳು ಇಬ್ಬರೂ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ದಂಪತಿ ಕೊರೊನಾ-ಕೋವಿಡ್ ಎಂದು ಮಕ್ಕಳಿಗೆ ಹೆಸರಿಟ್ಟ ನಂತರ ಆಸ್ಪತ್ರೆಯಲ್ಲಿ ಅವಳಿ ಮಕ್ಕಳು ಕೇಂದ್ರ ಬಿಂದುವಾಗಿದ್ದವು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾಗಿದ್ದು, ದೆಹಲಿಯ ಪುರಾಣಿ ಬಸ್ತಿ ಪ್ರದೇಶದ ಬಾಡಿಗೆ ಮನೆಯಲ್ಲಿ ದಂಪತಿ ವಾಸಿಸುತ್ತಿದ್ದಾರೆ.
0 comments:
Post a Comment