ಮಂಗಳೂರು (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ 39 ವರ್ಷದ ವ್ಯಕ್ತಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಸತತ 12 ದಿನಗಳ ನೆಗೆಟಿವ್ ವರದಿಗಳ ಬಳಿಕ ಇದೀಗ ಜಿಲ್ಲೆಯ 13ನೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಸೋಂಕು ದೃಢಪಟ್ಟ ವ್ಯಕ್ತಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರಾಗಿದ್ದು, ಸುಪ್ರೀಂಕೋರ್ಟ್ ವಕೀಲರು ಎನ್ನಲಾಗಿದೆ. ಕೋರ್ಟ್ ಕೆಲಸದ ನಿಮಿತ್ತ ಅವರು ದೆಹಲಿಗೆ ತೆರಳಿದ್ದು, ಮಾರ್ಚ್ 21ರಂದು ನಿಝಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ಆಗಮಿಸಿ ಬಳಿಕ ಮನೆಯಲ್ಲೇ ಇದ್ದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ ವ್ಯಕ್ತಿಯ ಫೋನ್ ಟವರ್ ಲೊಕೇಶನ್ ಆಧಾರದಲ್ಲಿ ಪತ್ತೆ ಮಾಡಿ, ವಕೀಲರನ್ನು ಮಾರ್ಚ್ 23ರಿಂದಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದರು. ನಂತರ ಸೋಂಕಿನ ಲಕ್ಷಣ ಕಂಡು ಬಂದಿರುವುದರಿಂದ ಗಂಟಲ ದ್ರಾವಣ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಂತೆ ಇಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ತಬ್ಲಿಘಿಗೆ ತೆರಳಿದ ಮತ್ತು ಆ ಪ್ರದೇಶದಲ್ಲಿ ಸುತ್ತಾಡಿದ ಜಿಲ್ಲೆಯ 29 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಇವರ ಜೊತೆ ತೆರಳಿದ್ದ ತುಂಬೆ ಗ್ರಾಮದ ವ್ಯಕ್ತಿಗೆ ಎಪ್ರಿಲ್ 4ರಂದೇ ಕೊರೊನಾ ಪಾಸಿಟಿವ್ ಬಂದಿತ್ತು. ಕಳೆದ 12 ದಿನದಿಂದ ಒಂದೇ ಒಂದು ಕೇಸ್ ಇಲ್ಲದೇ ಹಾಗೂ ಪಾಸಿಟಿವ್ ಕಂಡು ಬಂದ 9 ಮಂದಿ ಗುಣಮುಖರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯ ಜನರು ಮತ್ತೆ ಆತಂಕಗೊಳ್ಳುವಂತೆ ಮಾಡಿದೆ.
0 comments:
Post a Comment