ವಿಟ್ಲ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಹಿನ್ನಲೆಯಲ್ಲಿ ಜಿಲ್ಲೆಯ 2 ಲಕ್ಷಕ್ಕೂ ಮಿಕ್ಕಿದ ಬೀಡಿ ಕಾರ್ಮಿಕರ ಬದುಕು ಅತಂತ್ರವಾಗಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಬೀಡಿ ಕಾರ್ಮಿಕರ ಬದುಕಿನ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಿಐಟಿಯು ಬಂಟ್ವಾಳ ತಾಲೂಕು ಕಾರ್ಯದರ್ಶಿ ಎ. ರಾಮಣ್ಣ ವಿಟ್ಲ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು ಜಿಲ್ಲೆಯಲ್ಲಿ ಸುಮಾರು 2 ಲಕ್ಷಕ್ಕಿಂತಲೂ ಅಧಿಕ ಬೀಡಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ, ಕೊರೋನಾ ವೈರಸ್ ನಿಯಂತ್ರಣ ಸಂಬಂಧಿ ಲಾಕ್‍ಡೌನ್ ವಿಧಿಸಿದ ಬಳಿಕ ಕಳೆದ ಒಂದು ತಿಂಗಳಿನಿಂದ ಬೀಡಿ ಕಾರ್ಮಿಕರಿಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಬೀಡಿ ಕಂಪೆನಿ ಮಾಲಕರು ಕಾರ್ಮಿಕರಿಗೆ ಯಾವುದೇ ಪರಿಹಾರ ಅಥವಾ ರಜೆ ಸಂಬಳ ನೀಡುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಬೀಡಿ ಕಾರ್ಮಿಕರ ಬದುಕು ಅಯೋಮಯವಾಗಿದೆ. ಬೀಡಿ ಉದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಕಾರ್ಮಿಕರಾಗಿದ್ದು, ಇವರಿಗೆ ದಿನ ನಿತ್ಯದ ಜೀವನಕ್ಕೆ ಬಹಳಷ್ಟು ಕಷ್ಟವಾಗಿದೆ. ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬೀಡಿ ಕಾರ್ಮಿಕರು ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗುವುದಂತೂ ಖಂಡಿತ.
ಬೀಡಿ ಕಾರ್ಮಿಕರ ಬದುಕಿನ ಸಂಕಷ್ಟ ಅರ್ಥ ಮಾಡಿಕೊಂಡು ಜಿಲ್ಲಾಡಳಿತ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು. ಬೀಡಿ ಕಾರ್ಮಿಕರ ಬದುಕುವ ಹಕ್ಕನ್ನು ಸರಕಾರ ಎತ್ತಿಹಿಡಿಯುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ರಾಮಣ್ಣ ವಿಟ್ಲ ಡೀಸಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
0 comments:
Post a Comment