ಮಂಗಳೂರು (ಕರಾವಳಿ ಟೈಮ್ಸ್) : ಕಾಸರಗೋಡು-ಮಂಗಳೂರು ಗಡಿ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸುಪ್ರೀಂ ಮೆಟ್ಟಿಲೇರಿರುವ ಬಗ್ಗೆ ಪುರಾವೆಗಳು ಬಿಡುಗಡೆಗೊಂಡದ್ದೇ ತಡ ಸ್ವತಃ ಸ್ವಪಕ್ಷೀಯರು ಹಾಗೂ ಅಭಿಮಾನಿಗಳೇ ಸಾಮಾಜಿಕ ಜಾಲ ತಾಣಗಳಲ್ಲಿ ಕಟು ಟೀಕೆಗಳನ್ನು ಮಾಡುತ್ತಿರುವುದು ಇದೀಗ ವೈರಲ್ ಆಗುತ್ತಿದೆ.
ವೈದ್ಯರ ಮಗನಾಗಿರುವ ಮಿಥುನ್‍ರವರೇ ತಾವು ಒಬ್ಬ ಜನನಾಯಕ. ಆದರೆ ಜನಸಾಮಾನ್ಯರ ಕಷ್ಟ ನೋವುಗಳು ನಿಮಗೆ ಅರ್ಥವಾಗದ್ದು ಮಾತ್ರ ವಿಪರ್ಯಾಸ. ಕಾಸರಗೋಡು ಮತ್ತು ಮಂಗಳೂರು ಗಡಿಭಾಗವನ್ನು ತೆರೆದುಕೊಡುವಂತೆ ಕೇರಳ ಹೈಕೋರ್ಟ್ ಆದೇಶಿಸಿದ್ದರ ವಿರುದ್ದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ತಾವು ಯಾರನ್ನು ಓಲೈಕೆ ಮಾಡಲು ಹೊರಟಿದ್ದೀರ ಎಂಬುದು ಅರ್ಥವಾಗುತ್ತಿಲ್ಲ. ಗಡಿ ಭಾಗದ ಹಾಗೂ ಕಾಸರಗೋಡಿನ ಹೆಚ್ಚಿನ ಜನತೆ ವೈದ್ಯಕೀಯ ಹಾಗೂ ಶಿಕ್ಷಣಕ್ಕಾಗಿ ಮಂಗಳೂರನ್ನೇ ಅವಲಂಬಿತರಾಗಿದ್ದಾರೆ. ಅದಕ್ಕೆ ನಾವು ಹೆಮ್ಮೆಪಡಬೇಕೇ ಹೊರತು ದ್ವೇಷವನ್ನು ಮೈಗೂಡಿಸಿ ಅದರಿಂದ ಅವರನ್ನು ವಂಚಿತರಾಗಿಸಬಾರದು. ಗಡಿಯನ್ನು ಬಂದ್ ಮಾಡಿದ ಪರಿಣಾಮವಾಗಿ 4 ಜನರು ಸಾವಿಗೀಡಾಗಿದ್ದು ಇದರ ಕುರಿತು ಉತ್ತರಿಸಲು ತಾವು ಪ್ರಯತ್ನಿಸಿದ್ದೀರಾ? ಮತ್ತೇನಕ್ಕೆ ಈ ರೀತಿಯ ಮೂರ್ಖತನದ ನಿರ್ಧಾರ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಎಂಬುದು ಜನತೆಗೆ ತಿಳಿಯಬೇಕಾಗಿದೆ. ದ.ಕ ಜಿಲ್ಲೆಯ ಹಲವರ ಕುಟುಂಬದ ಕೊಂಡಿ ಕಾಸರಗೋಡಿನಲ್ಲೂ ಇದೆ. ತಾವಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ತಮ್ಮೊಳಗೆ ಸಂಘ ಮನಸ್ಥಿತಿಯಿದೆ ಎಂಬ ಕೆಲವರ ವಾದವನ್ನು ಅಲ್ಲಗಳೆದ ಕಾಸರಗೋಡಿಗರು ನೀವು ವಿಜಯಿಯಾಗಬೇಕೆಂದು ಧ್ವನಿಗೂಡಿಸಿದವರು. ರಾಜಮೋಹನ್ ಉಣ್ಣಿತ್ತಾನ್‍ಗೆ ಜತೆಗಾರನಾಗಿ ಮಿಥುನ್ ರೈಯನ್ನು ಕಳುಹಿಸಬೇಕೆಂದು ವಿನಂತಿಸಿದವರು. ಆದರೆ ತಾವಿಂದು ಸೋತಾಗ, ಅದೇ ಉಣ್ಣಿತ್ತಾನ್‍ಗೆ ವಿರೋಧವಾಗಿ ಕೋರ್ಟಿಗೆ ಹೋಗಿದ್ದೀರಾ!? ಇದು ತಮ್ಮೊಳಗಿನ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದೆ ಎಂಬ ಕಟು ಟೀಕೆಯ ಸಂದೇಶಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಅದೇ ರೀತಿ ಸದಾ ಕೇರಳದ ಕಮ್ಯುನಿಸ್ಟ್ ಸರಕಾರದ ವಿರುದ್ದ ವಿನಾ ಕಾರಣ ಜರೆಯುತ್ತಿರುವ ಕಾಸರಗೋಡು ಭಾಗದ ಕಾಂಗ್ರೆಸ್ ನಾಯಕರೇ ಇದೀಗ ನಿಮ್ಮ ಪಕ್ಷದ ನಾಯಕ ಕೈಗೊಂಡಿರುವ ಅಮಾನವೀಯ ಕ್ರಮದ ಬಗ್ಗೆ ಅದ್ಯಾರಿಗೆ ದೂರು ನೀಡುತ್ತೀರಿ ಎಂಬ ಸಂದೇಶಗಳೂ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
0 comments:
Post a Comment