ಅವೈಜ್ಞಾನಿಕ ತಪಾಸಣೆಯ ವೀಡಿಯೋ ಸಹಿತ ವರದಿ ಪ್ರಕಟಿಸಿದ್ದ ಕರಾವಳಿ ಟೈಮ್ಸ್
ಉಳ್ಳಾಲದ ನಗರಸಭೆ ಹೆಲ್ತ್ ಇನ್ಸ್‍ಪೆಕ್ಟರ್‍ಗೆ ಬಂಟ್ವಾಳ ಪುರಸಭಾ ಪರಿಸ ಅಧಿಕಾರಿ ಚಾರ್ಜ್
ಸುಳ್ಳು ಆಪಾದನೆಯ ದೂರಿನಿಂದ ಜೈಲು ಪಾಲಾದ ಅಮಾಯಕರ ಬಿಡುಗಡೆಗೆ ಕ್ರಮಕ್ಕೆ ಆಗ್ರಹ
ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿ ಕೋರೋನಾ ಹಾಟ್‍ಸ್ಪಾಟ್ ಘೋಷಣೆಯಾದ ಹೊರತಾಗಿಯೂ ಬೇಜವಾಬ್ದಾರಿ ವರ್ತನೆ ತೋರಿ ಪೌರ ಕಾರ್ಮಿಕರನ್ನು ಅವೈಜ್ಞಾನಿಕ ರೀತಿಯಲ್ಲಿ ಟೆಂಪರೇಚರ್ ಚೆಕ್ ಮಾಡಿ ಆತಂಕ ಉಂಟು ಮಾಡಿದ್ದ ಬಂಟ್ವಾಳ ಪುರಸಭೆಯ ಪರಿಸರ ಅಧಿಕಾರಿ ಜಾಸ್ಮಿನ್ ಅವರ ಕರ್ತವ್ಯ ಲೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನಲೆಯಲ್ಲಿ ಅವರನ್ನು ಕಡ್ಡಾಯ ರಜೆಯಲ್ಲಿ ತೆರಳುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ತೆರವಾದ ಬಂಟ್ವಾಳ ಪುರಸಭೆಯ ಪರಿಸರ ಅಧಿಕಾರಿ ಹುದ್ದೆಗೆ ಉಳ್ಳಾಲ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರನ್ನು ಹೆಚ್ಚುವರಿಯಾಗಿ ಪ್ರಬಾರ ನೆಲೆಯಲ್ಲಿ ನೇಮಿಸಲಾಗಿದೆ.
ಕೊರೋನಾ ಭೀತಿಯ ನಡುವೆಯೂ ಇಲ್ಲಿನ ಪರಿಸರ ಅಧಿಕಾರಿ ಪೌರ ಕಾರ್ಮಿಕರನ್ನು ಹಳೆ ಮಾದರಿಯ ಬಾಯಿಗೆ ಹಾಕುವ ಕಿಟ್ ಮೂಲಕ ಉಷ್ಣಾಂಶ ಪರೀಕ್ಷೆ ನಡೆಸುತ್ತಿದ್ದು, ಒಬ್ಬರ ಬಾಯಿಗೆ ಹಾಕಿದ ಅದೇ ಕಿಟ್‍ನ್ನು ಇನ್ನೊಬ್ಬ ಕಾರ್ಮಿಕರಿಗೂ ಬಳಸುತ್ತಿರುವ ಬಗ್ಗೆ ಸಾರ್ವಜನಿಕರು ಫೋಟೋ, ವೀಡಿಯೋ ಸಹಿತ ಹಿರಿಯ ಅಧಿಕಾರಿಗಳಿಗೆ ದೂರಿಕೊಂಡ ಹಿನ್ನಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಪರಿಸರ ಅಧಿಕಾರಿ ಜಾಸ್ಮಿನ್ ಅವರ ಕಾರ್ಯವೈಖರಿಯಲ್ಲಿ ಕರ್ತವ್ಯಲೋಪ ಕಂಡು ಬಂದ ಹಿನ್ನಲೆಯಲ್ಲಿ ಇದೀಗ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ ಎನ್ನಲಾಗಿದೆ.
ಸಾರ್ವಜನಿಕರ ವೀಡಿಯೋ ಸಹಿತ ದೂರಿಗೆ ಸ್ಪಂದಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಅವರು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿಗೆ ತಕ್ಷಣ ವರದಿ ನೀಡುವಂತೆ ಸೂಚಿಸಿದ್ದರು.
ಪರಿಸರ ಅಧಿಕಾರಿ ಜಾಸ್ಮಿನ್ ತನ್ನ ಪತಿ ಜೊತೆ ಸೇರಿ ದರ್ಪ ಮೆರೆಯುತ್ತಿರುವ ಬಗ್ಗೆಯೂ ಈ ಹಿಂದೆ ಸಾರ್ವಜನಿಕರು ಹಲವು ಬಾರಿ ಮೇಲಧಿಕಾರಿಗಳಿಗೆ ದೂರಿಕೊಂಡಿದ್ದರು. ಆದರೆ ಕ್ರಮ ಮಾತ್ರ ವಿಳಂಬವಾಗಿತ್ತು. ಜನರನ್ನು ಯಾಮಾರಿಸುತ್ತಲೇ ಬೆಳೆದಿರುವ ಪರಿಸರ ಅಧಿಕಾರಿ ಕೊನೆಗೆ ಪುರಸಭೆಯ ಮುಖ್ಯಾಧಿಕಾರಿಯನ್ನೇ ಯಾಮಾರಿಸಲು ಶುರುವಿಟ್ಟಿದ್ದರು. ಪರಿಣಾಮ ತನ್ನ ವ್ಯಾಪ್ತಿಯಲ್ಲಿ ಬರುವ ಯಾವುದೇ ಕೆಲಸಗಳ ಬಗ್ಗೆಯೂ ಪುರಸಭಾಧಿಕಾರಿ ಗಮನಕ್ಕೆ ತರದೆ ಮಾಡುತ್ತಿದ್ದರು.
ಪೌರಕಾರ್ಮಿಕರ ಅವೈಜ್ಞಾನಿಕ ತಪಾಸಣೆಯನ್ನು ಕೂಡಾ ಮುಖ್ಯಾಧಿಕಾರಿ ಗಮನಕ್ಕೆ ನೀಡದೆ ಮಾಡಿದ ಪರಿಣಾಮ ಇಂದು ಎಡವಟ್ಟು ಸಂಭವಿಸಿದೆ. ಈ ಬಗ್ಗೆ ಮುಖ್ಯಾಧಿಕಾರಿಯವರು ಪರಿಸರ ಅಧಿಕಾರಿಗೆ ಕಾರಣ ಕೇಳಿ ನೋಟೀಸು ಕೂಡಾ ಜಾರಿ ಮಾಡಿದ್ದು, ಜಿಲ್ಲಾಧಿಕಾರಿಗೂ ಪತ್ರ ಬರೆದು ಮಾಹಿತಿ ನೀಡಿದ್ದರು ಎನ್ನಲಾಗಿದೆ.
ಸುಳ್ಳು ಪ್ರಕರಣ ದಾಖಲಿಸಿದ ಅಮಾಯಕರ ಬಿಡುಗಡೆಗೆ ಕ್ರಮ ಅಗತ್ಯ
ಜನಪ್ರತಿನಿಧಿಗಳ ಸಹಿತ ಪುರವಾಸಿಗಳ ಜೊತೆ ದರ್ಪದಿಂದಲೇ ವರ್ತಿಸುತ್ತಿದ್ದ ಪರಿಸರ ಅಧಿಕಾರಿ ತ್ಯಾಜ್ಯ ಸಮಸ್ಯೆ ಪರಿಹಾರದ ಬಗ್ಗೆ ದೂರಿಕೊಂಡರೂ ಕವಡೆ ಕಿಮ್ಮತ್ತು ನೀಡುತ್ತಿರಲಿಲ್ಲ ಎನ್ನಲಾಗಿದೆ. ಅಲ್ಲದೆ ಕೊವಿಡ್ ವೈರಸ್ ನಿಯಂತ್ರಣಕ್ಕಾಗಿ ಎಂಬ ನೆಪವೊಡ್ಡಿ ಬೀದಿಗಿಳಿಯುತ್ತಿದ್ದ ಈ ಮಹಿಳಾ ಅಧಿಕಾರಿ ಪೊಲೀಸರನ್ನು ಮೀರಿಸುವ ರೀತಿಯಲ್ಲಿ ಜನರ ಮೇಲೆ ಲಾಠಿ ಬೀಸುತ್ತಿದ್ದರು ಎನ್ನಲಾಗಿದ್ದು, ಪರಿಸರ ಅಧಿಕಾರಿಯ ಸುಳ್ಳು ಆಪಾದನೆಯಿಂದ ಹಲವರ ಮೇಲೆ ಎಫ್‍ಐಆರ್ ದಾಖಲಾಗಿದೆ. ಈ ಪೈಕಿ ಇಬ್ಬರು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ಈ ಬಗ್ಗೆ ತಕ್ಷಣ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಅಮಾಯಕರಿಗೆ ಆಗಿರುವ ಅನ್ಯಾಯಕ್ಕೆ ಸೂಕ್ತ ನ್ಯಾಯ ಒದಗಿಸಿ, ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ನಿವಾಸಿಗಳು ಆಗ್ರಹಿಸಿದ್ದಾರೆ.
0 comments:
Post a Comment