ಆಪರೇಶನ್ ಕಮಲ ಪ್ರಕ್ರಿಯೆಯಲ್ಲಿ ಅಮಿತೋತ್ಸಾಹ ತೋರುತ್ತಿದ್ದ ಬಿಜೆಪಿ ಚಾಣಕ್ಯ ಅಮಿತ್ ಶಾ ಕೊರೋನಾ ವಿಷಯದಲ್ಲಿ ಫುಲ್ ಸೈಲೆಂಟ್ - Karavali Times ಆಪರೇಶನ್ ಕಮಲ ಪ್ರಕ್ರಿಯೆಯಲ್ಲಿ ಅಮಿತೋತ್ಸಾಹ ತೋರುತ್ತಿದ್ದ ಬಿಜೆಪಿ ಚಾಣಕ್ಯ ಅಮಿತ್ ಶಾ ಕೊರೋನಾ ವಿಷಯದಲ್ಲಿ ಫುಲ್ ಸೈಲೆಂಟ್ - Karavali Times

728x90

7 April 2020

ಆಪರೇಶನ್ ಕಮಲ ಪ್ರಕ್ರಿಯೆಯಲ್ಲಿ ಅಮಿತೋತ್ಸಾಹ ತೋರುತ್ತಿದ್ದ ಬಿಜೆಪಿ ಚಾಣಕ್ಯ ಅಮಿತ್ ಶಾ ಕೊರೋನಾ ವಿಷಯದಲ್ಲಿ ಫುಲ್ ಸೈಲೆಂಟ್

 

 

ಸೆಂಟ್ರಲ್ ಹೋಂ ಮಿನಿಸ್ಟರ್ ಹೋಂ ಕ್ವಾರಂಟೈನ್ ನಡೆಸುತ್ತಿರುವ ಬಗ್ಗೆ ವಿರೋಧ ಪಕ್ಷಗಳ ನಾಯಕರ ಟಾಂಗ್


ನವದೆಹಲಿ (ಕರಾವಳಿ ಟೈಮ್ಸ್) : ಕಣ್ಣಿಗೆ ಕಾಣದ ಅಗೋಚರ ವೈರಸ್‍ವೊಂದರ ಆರ್ಭಟಕ್ಕೆ ಇಡೀ ಜಗತ್ತೇ ಮಂಡಿಯೂರಿ ನಮಸ್ಕರಿಸುತ್ತಿದೆ. ಇದಕ್ಕೆ ನಮ್ಮ ದೇಶವೂ ಹೊರತಾಗಿಲ್ಲ. ಇಡೀ ದೇಶ ಕೊರೊನಾ ಸೋಂಕಿಗೆ ತತ್ತರಿಸಿ ಹೋಗಿದೆ. ದೇಶದ ಬಹುತೇಕ ರಾಜ್ಯಗಳು ಕೊರೋನಾ ವೈರಸ್‍ನಿಂದಾಗಿ ಬಳಲಿ ಬೆಂಡಾಲಿ ಹೋಗಿದೆ. ಕೇಂದ್ರ ಸರಕಾರ ಇಡೀ ದೇಶವನ್ನೇ 21 ದಿನಗಳ ದೀರ್ಘ ಕಾಲ ಲಾಕ್‍ಡೌನ್ ಮಾಡುವ ಮೂಲಕ ಸಮರವನ್ನೇ ಸಾರಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನ್ನಾಹಾರ-ಪಾನೀಯಗಳಿಗೆ ಜನ ಪರಿತಪಿಸುವಂತಾಗಿದೆ. ಲಾಕ್‍ಡೌನ್ ಘೋಷಣೆಯಾದ ಬಳಿಕ ಕೆಲವೊಂದು ಸಮಸ್ಯೆಗೆ ತುತ್ತಾಗಿ ಜನ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ವೈರಸ್ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ನಿಯಂತ್ರಣ ಕ್ರಮಗಳನ್ನು ಘೋಷಿಸಿದೆ. ದೇಶದ ಜನರನ್ನುದ್ದೇಶಿಸಿ ಪ್ರಧಾನಿ ಮೋದಿ ಮೂರು ಬಾರಿ ಮಾತನಾಡಿ ಕೆಲವೊಂದು ಮನವಿಗಳನ್ನೂ ಮಾಡಿಕೊಂಡಿದ್ದಾರೆ.

    ಈ ಎಲ್ಲ ಜಂಜಾಟಗಳ ಮಧ್ಯೆ ಪ್ರಧಾನಿ ಬಳಿಕ ದೇಶದ ಸಂಪೂರ್ಣ ನಿಯಂತ್ರಣವನ್ನು ಮಾಡಬೇಕಾದ ಅತಿ ಮಹತ್ತರವಾದ ಖಾತೆಯನ್ನು ನಿಭಾಯಿಸುತ್ತಿರುವ ದೇಶದ ಗೃಹ ಮಂತ್ರಿ, ಬಿಜೆಪಿಯ ಚಾಣಾಕ್ಷ ಮನುಷ್ಯ ಎಂದೇ ಬಿಂಬಿತವಾಗಿರುವ ಅಮಿತ್ ಶಾ ಮಾತ್ರ ಒಂದೇ ಒಂದು ಹೇಳಿಕೆಯನ್ನೂ ಇದುವರೆಗೆ ನೀಡದೆ ಫುಲ್ ಸೈಲೆಂಟ್ ಆಗಿರುವ ಬಗ್ಗೆ ಇದೀಗ ವಿರೋಧ ಪಕ್ಷಗಳ ನಾಯಕರ ಸಹಿತ ದೇಶದ ಜನ ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.

    ದೇಶಾದ್ಯಂತ ವಿವಿಧ ರಾಜ್ಯಗಳ ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರಕಾರಗಳನ್ನು ಆಪರೇಶನ್ ಕಮಲ ನಡೆಸುತ್ತಾ, ಅನ್ಯ ಪಕ್ಷಗಳ ಶಾಸಕರನ್ನು ಕೋಟಿ ಕೋಟಿ ಕ್ರಯಕ್ಕೆ ಖರೀದಿಸಿ ಬಿಜೆಪಿ ಸರಕಾರವಾಗಿ ಪರಿವರ್ತಿಸಿ ಆ ಮೂಲಕ ದೇಶದ ರಾಜಕೀಯದಲ್ಲಿ ಒಂದು ರೀತಿಯ ಅಲ್ಲೋಲ-ಕಲ್ಲೋಲತೆ ಹಾಗೂ ರಾಜಕೀಯ ಜಂಜಾಟ ಸೃಷ್ಟಿಸಲು ಮುಂದೆ ನಿಂತು ನೇತೃತ್ವ ನೀಡುತ್ತಿದ್ದ ಚಾಣಕ್ಯ ಅಮಿತ್ ಷಾ ಇದೀಗ ದೇಶದ ಸಂಧಿಗ್ಧ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಪ್ರಧಾನಿ ಒಬ್ಬರ ತಲೆಗೆ ಹಾಕಿ ನಾಪತ್ತೆಯಾಗಿರುವ ಹಿಂದಿನ ಮರ್ಮವಾದರೂ ಏನು ಎಂಬುದೇ ಅರ್ಥವಾಗುತ್ತಿಲ್ಲ ಎಂಬ ಧಾಟಿಯಲ್ಲಿ ವಿರೋಧ ಪಕ್ಷಗಳ ನಾಯಕರು ಹಾಗೂ ದೇಶವಾಸಿಗಳು ಪ್ರಶ್ನಿಸುತ್ತಿದ್ದಾರೆ.

    ದೇಶಾದ್ಯಂತ ಕೊರೊನಾ ಸೋಂಕು ವ್ಯಾಪಿಸುತ್ತಲೇ ಇದೆ. ಪ್ರಧಾನಿ ಮೋದಿ ಈ ಬಗ್ಗೆ ನಿಯಂತ್ರಣಕ್ಕಾಗಿ ಹಲವು ಸಭೆಗಳನ್ನು ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರ ಸಲಹೆಗಳನ್ನೂ ಕೇಳಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ನಿರಂತರ ವಿದೇಶ ಪ್ರಯಾಣ ಮಾಡುತ್ತಿದ್ದ ಪ್ರಧಾನಿ ಮೋದಿ ಎಲ್ಲದಕ್ಕೂ ತಿಲಾಂಜಲಿ ಹಾಡಿದ್ದಾರೆ. ಆರೋಗ್ಯ ಸಚಿವ ಡಾ ಹರ್ಷವರ್ಧನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈ ಶಂಕರ್, ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಇವರೇ ಕೆಲ ಸಚಿವರು ಮಾತ್ರ ದೇಶದ ಸಂಧಿಗ್ಧ ಪರಿಸ್ಥಿತಿಯಲ್ಲಿ ಆಗೊಮ್ಮೆ ಈಗೊಮ್ಮೆ ಮಾದ್ಯಮಗಳ ಮುಂದೆ ಬಂದು ಹೋಗುತ್ತಿದ್ದಾರೆ ಹೊರತು ದೇಶದ ಜನರ ರಕ್ಷಣೆಯ ಹೊಣೆ ಹೊತ್ತಿರುವ ಗೃಹ ಸಚಿವರಾಗಲೀ, ಇತರ ಇಲಾಖೆಗಳ ಸಚಿವರಾಗಲೀ ಎಲ್ಲೂ ಜನರ ಮುಂದೆ ಕಂಡು ಬರುತ್ತಲೇ ಇಲ್ಲ ಎಂಬ ಆಕ್ರೋಶವನ್ನೂ ಕೂಡಾ ವಿರೋಧ ಪಕ್ಷಗಳು ಮಾಡುತ್ತಿವೆ. ತಮ್ಮ ಇಲಾಖೆಯ ಸುಪರ್ದಿಗೆ ಬರುವ ಪೊಲೀಸರು ಲಾಕ್‍ಡೌನ್ ಯಶಸ್ವಿಗೊಳಿಸಿ ಜನರನ್ನು ಮಾರಕ ವೈರಸ್‍ನಿಂದ ರಕ್ಷಿಸಲು ಟೊಂಕ ಕಟ್ಟಿ ಬೀದಿಗಿಳಿದಿರುವಾಗ ಇಲಾಖಾ ಹೊಣೆ ಹೊತ್ತ ಗೃಹ ಸಚಿವರು ಮಾತ್ರ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಕೇಂದ್ರ ಗೃಹ ಇಲಾಖೆಯ ಜವಾಬ್ದಾರಿಗಳನ್ನು ಕಾರ್ಯದರ್ಶಿ ಪಿ.ಎಸ್. ಶ್ರೀವಸ್ತ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದರೂ ಈ ಬಗ್ಗೆ ಸಚಿವ ಅಮಿತ್ ಶಾ ಇದುವರೆಗೂ ಒಂದೇ ಒಂದು ಮಾತನ್ನೂ ಮಾಧ್ಯಮಗಳ ಮುಂದೆ ಆಡಿಲ್ಲ. ಹೀಗಾಗೀ ಗೃಹ ಸಚಿವರ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು, ಅಮಿತ್ ಶಾ ಏಕಾಏಕಿ ತೆರೆಯ ಹಿಂದೆ ಸರಿಯಲು ಕಾರಣ ಏನು ಎಂಬ ಜಿಜ್ಞಾಸೆ ಇದೀಗ ಆರಂಭಗೊಂಡಿದೆ.

    ಈ ಬಗ್ಗೆ ದೇಶದಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿದೆ. ಕೊರೋನಾ ಜವಾಬ್ದಾರಿಯನ್ನು ಸಂಪೂರ್ಣವಾಗಿ ಪ್ರಧಾನಿಗೆ ವಹಿಸಿದರೇ, ಇದೊಂದು ರಾಷ್ಟ್ರೀಯ ದುರಂತ ಆಗಿರೋದ್ರರಿಂದ ಪ್ರಧಾನಿಯೇ ಮುಂದಾಳತ್ವದಲ್ಲಿ ನಡೆಯಲಿ ಎಂದು ಅಮಿತ್ ಷಾ ಸುಮ್ಮನಾಗಿದ್ದಾರಾ, ವಿಪಕ್ಷಗಳ ನಿಷ್ಠುರವನ್ನೇ ಕಟ್ಟಿಕೊಂಡಿರುವ ಅಮಿತ್ ಷಾ ಈ ವೇಳೆ ಫೀಲ್ಡಿಗಿಳಿದರೆ ಒಗ್ಗೂಡಿ ಕೆಲಸ ಮಾಡಲು ಕಷ್ಟ ಆಗಬಹುದು ಎಂದು ಸ್ವತಃ ಪ್ರಧಾನಿಯೇ ಅಮಿತ್ ಷಾ ಅವರನ್ನು ಪಕ್ಕಕ್ಕೆ ತಳ್ಳಿದರೇ, ಎನ್.ಆರ್.ಸಿ, ಸಿಎಎ ವಿಚಾರದಲ್ಲಿ ಕೆಲವು ಸಮುದಾಯಗಳು ಅಮಿತ್ ಶಾ ವಿರುದ್ಧವಾಗಿರುವುದರಿಂದ ವಿಪಕ್ಷ ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸ್ವತಃ ಮೋದಿಯೇ ವಹಿಸಿಕೊಂಡಿದ್ದಾರಾ, ಜವಾಬ್ದಾರಿ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರ ಮಧ್ಯೆ ಏನಾದರೂ ಭಿನ್ನಾಭಿಪ್ರಾಯಗಳು ಉದ್ಬವವಾಗಿರಬಹುದಾ ಎಂಬಿತ್ಯಾದಿ ಗಂಭೀರ ಚರ್ಚೆಗಳ ನಡುವೆ ವಷಾಂತ್ಯದಲ್ಲಿ ನಡೆಯುವ ಬಿಹಾರ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಅಮಿತ್ ಷಾ ಸಿದ್ದತೆ ನಡೆಸುತ್ತಿರಬಹುದೇ, ಅಥವಾ ಕೋರನೋನಾ ತುರ್ತು ಪರಿಸ್ಥಿತಿ ಮಧ್ಯೆಯೂ ಮಧ್ಯಪ್ರದೇಶ ಸರಕಾರವನ್ನು ಹೈಜಾಕ್ ಮಾಡಿದ ರೀತಿಯಲ್ಲಿ ಇನ್ಯಾವುದೇ ರಾಜ್ಯದ ಬಿಜೆಪಿಯೇತರ ಸರಕಾರಗಳ ಮೇಲೆ ಕಣ್ಣು ಹಾಯಿಸಿ ಅಲ್ಲಿನ ಎಂಎಲ್‍ಎಗಳನ್ನು ಖರೀಸುವ ಪ್ಲ್ಯಾನ್ ನಡಸುತ್ತಿರಬಹುದಾ ಎಂಬಿತ್ಯಾದಿ ವ್ಯಂಗ್ಯ ಚರ್ಚೆಗಳು ಕೂಡಾ ಸಾಮಾಜಿಕ ತಾಣಗಳಲ್ಲಿ ವಿರೋಧ ಪಕ್ಷಗಳ ನಾಯಕರು ನಡೆಸುತ್ತಿರುವ ಕಂಡು ಬರುತ್ತಿದೆ.   

    ಕೇಂದ್ರ ಸಚಿವರ ಸಭೆಯಲ್ಲಿ ಕೂಡಾ ಅಮಿತ್ ಶಾ ಹೆಚ್ಚು ಭಾಗಿಯಾಗುತ್ತಿಲ್ಲ. ಒಂದೆರಡು ಸಭೆಗಳನ್ನು ಹೊರತುಪಡಿಸಿದ್ರೆ ಹೆಚ್ಚು ಆಸಕ್ತಿ ತೋರಿಲ್ಲ. ಹೆಚ್ಚು ಆಕ್ಟಿವ್ ಆಗಿದ್ದ ನಾಯಕ ಹೀಗೆ ಸುಮ್ಮನಾಗಿದ್ದು ಯಾಕೆ ಎನ್ನುವ ಪ್ರಶ್ನೆ ಸ್ವಪಕ್ಷದ ನಾಯಕರಿಗೂ ಕಾಡುತ್ತಿದ್ದು, ಈ ಎಲ್ಲಾ ಸಂಶಯಗಳಿಗೆ ಸ್ವತಃ ಅಮಿತ್ ಷಾ ಅಥವಾ ಪ್ರಧಾನಿ ನರೇಂದ್ರ ಮೋದಿಯೇ ನೀಡಬೇಕಷ್ಟೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
  • Blogger Comments
  • Facebook Comments

0 comments:

Post a Comment

Item Reviewed: ಆಪರೇಶನ್ ಕಮಲ ಪ್ರಕ್ರಿಯೆಯಲ್ಲಿ ಅಮಿತೋತ್ಸಾಹ ತೋರುತ್ತಿದ್ದ ಬಿಜೆಪಿ ಚಾಣಕ್ಯ ಅಮಿತ್ ಶಾ ಕೊರೋನಾ ವಿಷಯದಲ್ಲಿ ಫುಲ್ ಸೈಲೆಂಟ್ Rating: 5 Reviewed By: karavali Times
Scroll to Top